ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆಗೆ ಅನುಮತಿ, ಅಡುಗೆ ಕೋಣೆಗೆ ಸಿಸಿಟಿವಿ ಕಡ್ಡಾಯ

ಚಾಮರಾಜನಗರದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತದ ನಂತರ ಎಚ್ಚೆತ್ತುಕೊಂಡಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಚಾಮರಾಜನಗರದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತದ ನಂತರ ಎಚ್ಚೆತ್ತುಕೊಂಡಿರುವ ಮುಜರಾಯಿ ಇಲಾಖೆ, ಇನ್ನುಮುಂದೆ ಎಲ್ಲ ದೇವಾಲಯಗಳಲ್ಲಿ ಪ್ರಸಾದ ವಿತರಣೆಗೆ ಅನುಮತಿ ಹಾಗೂ ಅಡುಗೆ ಮನೆಗೆ ಸಿಸಿಟಿವಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಪಡುವ ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ಅನ್ನದಾಸೋಹ ನಡೆಸುವ ಮುನ್ನ ಅನುಮತಿ ಪಡೆಯಬೇಕು ಮತ್ತು ದೇವರ ನೈವೇದ್ಯ ಹಾಗೂ ದಾಸೋಹ ತಯಾರಿಸುವ ಕೋಣೆಯಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಅಧಿಸೂಚನೆ ಹೊರಡಿಸಿದೆ.
ತಯಾರಿಸಿದ ಪ್ರಸಾದ ಸ್ವೀಕರಿಸಲು ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ವಿತರಣೆ ಮಾಡಬೇಕು. ದೇವಾಲಯಗಳಲ್ಲಿ ತಯಾರಿಸುವ ಪ್ರಸಾದವನ್ನು ಆರೋಗ್ಯಾಧಿಕರಿಗಳು ಪರಿಶೀಲನೆ ನಡೆಸಬೇಕು. ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ನೀಡುವ ಪ್ರಸಾದಕ್ಕೆ ಆರೋಗ್ಯಾಧಿಕಾರಿಯಿಂದ ಅನುಮತಿ ಪಡೆದ ಮೇಲೆಯೇ ವಿತರಣೆ
ಮಾಡಬೇಕು ಎಂದು ಸೂಚಿಸಲಾಗಿದೆ.
ದೇವಾಲಯದ ಪರಿಸರದಲ್ಲಿ ಭಕ್ತಾದಿಗಳೇ ಪ್ರಸಾದ ತಯಾರಿಸಿ ನೇರವಾಗಿ ಭಕ್ತರಿಗೆ ನೀಡುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ತಂಡದಿಂದ ಪರೀಕ್ಷೆ ಒಳಪಡಿಸಿ ಅನುಮತಿ ಪತ್ರ ಪಡೆಯುವುದು ಕಡ್ಡಾಯ ಮಾಡಲಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮುಜಾರಾಯಿ ಇಲಾಖೆಯ ಜಂಟಿ ಆಯುಕ್ತ ಜಯಪ್ರಕಾಶ್‌ ಅವರು, ಪ್ರಸಾದ ವಿತರಣೆಗೆ ಅನುಮತಿ ಪಡೆಯಬೇಕೆಂಬ ನಿಯಮ ಮೊದಲಿನಿಂದಲೂ ಇದೆ. 2012ರಲ್ಲೇ ಇದರ ಕುರಿತು ನಾವು ಸುತ್ತೋಲೆ ಹೊರಡಿಸಿದ್ದೆವು. ಈಗ ಮತ್ತೊಮ್ಮೆ ಬದಲಾದ ನಿಯಮ ಇರುವ‌ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದರು.
ಎಲ್ಲಾ ಮುಜರಾಯಿ ದೇವಾಲಯಗಳ ಅಡುಗೆ ಕೋಣೆಯಲ್ಲಿ ಭಟ್ಟರು ಹಾಗೂ ಸಹಾಯಕರನ್ನು ಬಿಟ್ಟು ಬೇರೆ ಯಾರನ್ನೂ ಸೇರಿಸಬಾರದು. ಹಾಗೇ ಸಿಸಿಟಿವಿಯನ್ನು ಕಡ್ಡಾಯ ಮಾಡಲಾಗುತ್ತದೆ ಎಂದು ಜಯಪ್ರಕಾಶ್‌ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com