ಪೇಜಾವರ ಶ್ರೀ 80ನೇ ವರ್ಧಂತಿ: ಉಡುಪಿಯಲ್ಲಿ ವಿಶ್ವೇಶತೀರ್ಥ ಸ್ವಾಮೀಜಿಗೆ ರಾಷ್ಟ್ರಪತಿ ದಂಪತಿ ಅಭಿನಂದನೆ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಅವರ ಪತ್ನಿ ಸವಿತಾ ಕೋವಿಂದ್ ಅವರು ಗುರುವಾರ ಪೇಜಾವರ...
ವಿಶ್ವೇಶತೀರ್ಥ ಸ್ವಾಮೀಜಿ - ರಾಷ್ಟ್ರಪತಿ ರಾಮನಾಥ್ ಕೋವಿಂದ್
ವಿಶ್ವೇಶತೀರ್ಥ ಸ್ವಾಮೀಜಿ - ರಾಷ್ಟ್ರಪತಿ ರಾಮನಾಥ್ ಕೋವಿಂದ್
ಉಡುಪಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಅವರ ಪತ್ನಿ ಸವಿತಾ ಕೋವಿಂದ್ ಅವರು ಗುರುವಾರ ಪೇಜಾವರ ವಿಶ್ವೇಶತೀರ್ಥ ಶ್ರೀಗಳ 80ನೇ ವರ್ಧಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀಗಳನ್ನು ಅಭಿನಂದಿಸಿದರು.
ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಪೇಜಾವರ ಶ್ರೀಗಳ ಜೀವನ ಚರಿತ್ರೆಯ ಸಾಕ್ಷ್ಯಚಿತ್ರವನ್ನು ರಾಷ್ಟ್ರಪತಿಗಳು ವೀಕ್ಷಿಸಿದರು. 
ಬಳಿಕ ಸ್ವಾಮೀಜಿ ಅವರೊಂದಿಗೆ ಉಭಯಕುಶಲೋಪರಿ ನಡೆಸುತ್ತ, ಸಾಮಾಜಕ್ಕೆ ನಿಮ್ಮ ಮಾರ್ಗದರ್ಶನ ಅವಶ್ಯವಾಗಿ ಬೇಕಿದೆ. ಉಡುಪಿಗೆ, ಪೇಜಾವರ ಮಠಕ್ಕೆ ಆಗಮಿಸಿ ನಿಮ್ಮನ್ನು ಭೇಟಿ ಮಾಡಿದ್ದು ಅತೀವ ಸಂತಸ ತಂದಿದೆ ಎಂದರು.
ಈ ವೇಳೆ ಮಾತನಾಡಿದ ಪೇಜಾವರ ಶ್ರೀಗಳು, ಗೋವಿಂದನ ಸನ್ನಿಧಿಗೆ ಕೋವಿಂದ ಅವರು ಆಗಮಿಸಿರುವುದು ಸಂತೋಷವಾಗಿದೆ. ಪಾಜಕ ಕ್ಷೇತ್ರದಲ್ಲಿ ಮಧ್ವ ವಿಶ್ವವಿದ್ಯಾನಿಲಯ ಸ್ಥಾಪಿಸಲು ತಯಾರಿ ನಡೆಯುತಿದ್ದು, ನಿಮ್ಮ ಸಹಕಾರ ಬೇಕು ಎಂದು ಶ್ರೀಗಳು ಮನವಿ ಮಾಡಿದರು.
ಶ್ರೀಗಳು ರಾಷ್ಟ್ರಪತಿಗಳಿಗೆ ಹಟ್ಟೆ ಪ್ರಭಾವಳಿ, ಕಂಚಿನ ಕೃಷ್ಣನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದರು. ಅಲ್ಲದೆ ಪೇಜಾವರ ಶ್ರೀಗಳು ಬರೆದ 12 ಧಾರ್ಮಿಕ ಪುಸ್ತಕಗಳು ನೀಡಿ ಶಾಲು ಹಾಕಿ ರಾಷ್ಟ್ರಪತಿಗಳನ್ನು ಗೌರವಿಸಲಾಯಿತು. ರಾಷ್ಟ್ರಪತಿ ಅವರ ಪತ್ನಿ ಸವಿತಾ ಕೋವಿಂದ ಅವರಿಗೆ ಸೀರೆ ಮತ್ತು ಶಂಕರಪುರ ಮಲ್ಲಿಗೆ ನೀಡಲಾಯಿತು.
ಪೇಜಾವರ ಮಠದಿಂದ ಶ್ರೀ ಕೃಷ್ಣ ದರ್ಶನಕ್ಕೆ ತೆರಳಿದ ರಾಷ್ಟ್ರಪತಿಗಳು ದೇವರ ದರ್ಶನ ಪಡೆದು, ಪರ್ಯಾಯ ಪಲಿಮಾರು ಶ್ರೀಗಳಿಂದ ಮಂತ್ರಾಕ್ಷತೆ ಸ್ವೀಕರಿಸಿದರು. ಪರ್ಯಾಯ ಪಲಿಮಾರು ಮಠದ ವತಿಯಿಂದ 1.5 ಅಡಿ ಎತ್ತರದ ಕಡೆಗೋಲು ಶ್ರೀಕೃಷ್ಣ ವಿಗ್ರಹವನ್ನು ಉಡುಗೊರೆಯಾಗಿ ನೀಡಲಾಯಿತು. ಬಳಿಕ ರಾಷ್ಟ್ರಪತಿಗಳು 12:50ಕ್ಕೆ ಉಡುಪಿಯಿಂದ ನಿರ್ಗಮಿಸಿದರು. 
ಇಂದು ಬೆಳಗ್ಗೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿಗಳು, ಅಲ್ಲಿಂದ ವಾಯುಸೇನಾ ವಿಶೇಷ ಹೆಲಿಕಾಪ್ಟರ್‌ನಲ್ಲಿ ಆದಿ ಉಡುಪಿ ಹೆಲಿಪ್ಯಾಡ್ ಗೆ ಆಗಮಿಸಿದರು. 
ಹೆಲಿಪ್ಯಾಡ್‌ನಲ್ಲಿ ಜಿಲ್ಲಾಡಳಿತ ವತಿಯಿಂದ ರಾಷ್ಟ್ರಪತಿಗಳನ್ನು ಸ್ವಾಗತಿಸಲಾಯಿತು. ಆದಿ ಉಡುಪಿ ಹೆಲಿಪ್ಯಾಡ್‌ನಲ್ಲಿ ರಾಜ್ಯಪಾಲ ವಜುಭಾಯಿ ವಾಲ, ನಾಗಲ್ಯಾಂಡ್​ ರಾಜ್ಯಪಾಲ ಪದ್ಮನಾಭ ಆಚಾರ್ಯ, ಉಸ್ತುವಾರಿ ಸಚಿವೆ ಡಾ.ಜಯಮಾಲ, ಜಿ.ಪಂ ಅಧ್ಯಕ್ಷ ದಿನಕರ ಬಾಬು ಸ್ವಾಗತಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com