ಫೆಬ್ರವರಿ 4ರ 'ಬೆಂಗಳೂರು ಬಂದ್'ಗೆ ಹೈಕೋರ್ಟ್ ತಡೆ

ಮಹದಾಯಿ ವಿವಾದ ಇತ್ಯಾರ್ಥಪಡಿಸಬೇಕು ಎಂದು ಒತ್ತಾಯಿಸಿ ಫೆಬ್ರವರಿ 4ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ 'ಬೆಂಗಳೂರು ಬಂದ್'....
ಹೈಕೋರ್ಟ್
ಹೈಕೋರ್ಟ್
ಬೆಂಗಳೂರು: ಮಹದಾಯಿ ವಿವಾದ ಇತ್ಯಾರ್ಥಪಡಿಸಬೇಕು ಎಂದು ಒತ್ತಾಯಿಸಿ ಫೆಬ್ರವರಿ 4ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ 'ಬೆಂಗಳೂರು ಬಂದ್'ಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.
'ಬೆಂಗಳೂರು ಬಂದ್' ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್ ಜಿ ರಮೇಶ್ ನೇತೃತ್ವದ ವಿಭಾಗೀಯ ಪೀಠ,  ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಬಂದ್ ಮಾಡುವಂತಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ತೀರ್ಪು ಪಾಲಿಸಲು ಕ್ರಮ ಕೈಗೊಳ್ಳಿ ಮತ್ತು ಜನಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಎಲ್ಲವನ್ನು ಬಂದ್ ಮಾಡಿ ಬೇರೆಯವರಿಗೆ ತೊಂದರೆ ಕೊಡುವುದು ಮೂಲಭೂತ ಹಕ್ಕು ಅಲ್ಲ ಮತ್ತು ಇದು ಸಂವಿಧಾನ ಬಾಹಿರ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ನಡೆಯುವ ದಿನ ಕರೆ ನೀಡಿದ್ದ ಬೆಂಗಳೂರು ಬಂದ್‌ಗೆ ಹೈಕೋರ್ಟ್‌ ತಡೆ ನೀಡಿದೆ ಎಂದು ಎಎನ್‌ಐ ಟ್ವೀಟ್‌ ಮಾಡಿದೆ.
ಈ ಮಧ್ಯೆ, ಮಹದಾಯಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುವ ಬಗ್ಗೆ ಬಿಜೆಪಿಯವರು ಫೆ.3ರೊಳಗೆ ಭರವಸೆ ನೀಡದಿದ್ದರೆ, ಫೆ. 4ರಂದು ಬೆಂಗಳೂರು ಬಂದ್ ನಡೆಸಲಾಗುವುದು ಎಂದು ಕನ್ನಡ ಒಕ್ಕೂಟ ಸ್ಪಷ್ಟಪಡಿಸಿದೆ.
ಮಹದಾಯಿ ಹೋರಾಟಗಾರರ ವಿಚಾರವನ್ನು ಪ್ರಧಾನಿಗೆ ಮುಟ್ಟಿಸಲೇಬೇಕು. ಇಲ್ಲವಾದಲ್ಲಿ ಕಳೆದ 3 ವರ್ಷಗಳ ನಿರಂತರ ಹೋರಾಟಕ್ಕೆ ಬೆಲೆ ಇಲ್ಲದಂತಾಗುತ್ತದೆ. ಫೆ.4ರಂದು ಪರಿವರ್ತನಾ ಯಾತ್ರೆ ಸಮಾರೋಪದ ವೇಳೆ ಪ್ರಧಾನಿ ಈ ಬಗ್ಗೆ ಮಾತನಾಡಲಿದ್ದಾರೆ ಎಂಬ ಭರವಸೆ ನೀಡಿದರೆ ಮಾತ್ರ ಹೋರಾಟದಿಂದ ಹಿಂದೆ ಸರಿಯಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com