
ಮೈಸೂರು: ರಾಜ್ಯಸರ್ಕಾರದ ಅನಿಲ ಭಾಗ್ಯ ಯೋಜನೆಯಿಂದ ಕೇಂದ್ರಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆಯ ತಾರತಮ್ಯ ನೀತಿಯನ್ನು ನಿವಾರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಒಂದು ಹಳ್ಳಿಯಲ್ಲಿನ ಅರ್ಹ 100 ಫಲಾನುಭವಿಗಳಿಗೆ ಮಾತ್ರ ಅನಿಲ ಸಿಲಿಂಡರ್ ನೀಡಲಾಗುತ್ತಿದ್ದು, ಸಾಕಷ್ಟು ಗೊಂದಲ ಹಾಗೂ ಗ್ರಾಮಸ್ಥರಲ್ಲೇ ಒಡಕಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಈ ತಾರತಮ್ಯ ನೀತಿಯನ್ನು ನಿವಾರಿಸಲು ರಾಜ್ಯಸರ್ಕಾರದಿಂದ ಅರ್ಹ 1 ಲಕ್ಷ ಕುಟುಂಬಗಳಿಗೆ ಉಚಿತ ಸ್ಟೌವ್. ಲೈಟರ್ , ಸಿಲಿಂಡರ್ ಮತ್ತು ಎರಡು ಉಚಿತ ಪುನರ್ಭತಿ ಸಿಲಿಂಡರ್ ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರಸರ್ಕಾರ ಕೂಡಾ ಇದನ್ನು ಅಳವಡಿಸಿಕೊಳ್ಳುವಂತೆ ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಹೇಳಲಾಗಿದ್ದು, ಅವರು ಸಮ್ಮತಿ ನೀಡಿದ್ದಾರೆ, ಆದಾಗ್ಯೂ, ಕರ್ನಾಟಕ ಸರ್ಕಾರ ಯಾವುದೇ ಪೆಟ್ರೋಲಿಯಂ ಕಂಪನಿಗಳ ಪರವಾಗಿ ಹಣ ಪಾವತಿಸಿಲ್ಲ ಎಂದು ಸ್ಪಷ್ಪಪಡಿಸಿದರು.
ಅಂಗಡಿಗಳು ತಮಗಿಷ್ಟಬಂದ ದರದಲ್ಲಿ ಸಿಲಿಂಡರ್ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ, ಗ್ರಾಮ ಪಂಚಾಯಿತಿ ಸದಸ್ಯರನ್ನೊಳಗೊಂಡ ಜಾಗೃತಿ ಸಮಿತಿ ರಚಿಸಲಾಗುತ್ತಿದೆ. ಸಿಲಿಂಡರ್ ಬಂದಾಗ ಇವರು ಸಹಿ ಹಾಕಲಿದ್ದಾರೆ ಎಂದು ಯು. ಟಿ. ಖಾದರ್ ಹೇಳಿದ್ದಾರೆ.
Advertisement