ಮನೋರೋಗಿಗಳಿಗೆ ಚಿಕಿತ್ಸೆ ನೀಡುವ ದೃಷ್ಟಿದೋಷವಿರುವ ನಿಮ್ಹಾನ್ಸ್ ವೈದ್ಯ!

ಕಳೆದ ವರ್ಷ ಡಿಸೆಂಬರ್ ನಲ್ಲಿ 32 ವರ್ಷದ ಶರದ್ ಫಿಲಿಪ್ ಅವರಿಗೆ ನಿಮ್ಹಾನ್ಸ್ ಸಂಸ್ಥೆ ವೈದ್ಯಕೀಯ ಪದವಿ...
ತಮ್ಮ ತಾಯಿ ಶಾಲಿನಿ ರಾಜಿ ಫಿಲಿಪ್ ರೊಂದಿಗೆ ನಿಮ್ಹಾನ್ಸ್ ನ ಘಟಿಕೋತ್ಸವದಲ್ಲಿ ಡಾ.ಶರದ್ ಫಿಲಿಪ್
ತಮ್ಮ ತಾಯಿ ಶಾಲಿನಿ ರಾಜಿ ಫಿಲಿಪ್ ರೊಂದಿಗೆ ನಿಮ್ಹಾನ್ಸ್ ನ ಘಟಿಕೋತ್ಸವದಲ್ಲಿ ಡಾ.ಶರದ್ ಫಿಲಿಪ್
ಬೆಂಗಳೂರು: ಕಳೆದ ವರ್ಷ ಡಿಸೆಂಬರ್ ನಲ್ಲಿ 32 ವರ್ಷದ ಶರದ್ ಫಿಲಿಪ್ ಅವರಿಗೆ ನಿಮ್ಹಾನ್ಸ್ ಸಂಸ್ಥೆ ವೈದ್ಯಕೀಯ ಪದವಿ ನೀಡಿದಾಗ ಜೀವನದಲ್ಲಿ ಅದ್ಭುತ ಘಟನೆ ನಡೆದಂತೆ ಭಾಸವಾಯಿತು. ಅವರ ಕುಟುಂಬದವರು, ಸ್ನೇಹಿತರು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಿಬ್ಬಂದಿ ಶರದ್ ನನ್ನು ಖುಷಿಯಿಂದ ಅಭಿಂದಿಸಿ ಹೊಗಳುತ್ತಿದ್ದರು. ವೇದಿಕೆಯ ಕೆಳಗೆ ಕುಳಿತಿದ್ದವರೆಲ್ಲ ಶರದ್ ವೈದ್ಯಕೀಯ ಪದವಿ ಪ್ರಮಾಣಪತ್ರ ಪಡೆದಾಗ ಎದ್ದುನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿತು.
ಇಂದು ಡಾ.ಶರದ್ ಫಿಲಿಪ್ ನಿಮ್ಹಾನ್ಸ್ ಸಂಸ್ಥೆಯಲ್ಲಿ ಮನೋವೈದ್ಯರಾಗಿ ಸೇವೆ ಆರಂಭಿಸಿದ್ದಾರೆ. ಇವರ ವಿಶಿಷ್ಟವೆಂದರೆ ಇವರಿಗೆ ಚಿಕ್ಕವಯಸ್ಸಿನಿಂದಲೇ ದೃಷ್ಟಿ ಸಮಸ್ಯೆಯಿದೆ. ಆದರೂ ರೋಗಿಗಳನ್ನು ವಿಶಿಷ್ಟ ರೀತಿಯಿಂದ ನೋಡಿ ಚಿಕಿತ್ಸೆ ನೀಡುತ್ತಾರೆ. ಸಮಾಜದಲ್ಲಿ ನಿಕೃಷ್ಟಕ್ಕೊಳಗಾಗುವ ಮನೋರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ನೀಡಬೇಕೆಂಬುದು ಅವರ ಗುರಿ.
ಶರದ್ ಅವರ ಎರಡೂ ಕಣ್ಣುಗಳಿಗೆ ರೆಟಿನೈಟಿಸ್ ಪಿಗ್ಮೆಂಟೋಸಾ ಎಂಬ ಸಮಸ್ಯೆಯಿದೆ. ಶೇಕಡಾ 70ರಷ್ಟು ಭಾಗ ಕಣ್ಣು ಕಾಣಿಸುವುದಿಲ್ಲ ಮತ್ತು ಅದು ಶಾಶ್ವತ ಸಮಸ್ಯೆ.
ಚಿಕ್ಕವರಿರುವಾಗ ಶಾಲೆಯಲ್ಲಿ ತರಗತಿಯಲ್ಲಿ ಏನು ಬರೆದಿದೆ ಎಂದು ಶರದ್ ಗೆ ಕಾಣಿಸುತ್ತಿರಲಿಲ್ಲವಂತೆ. ಅವರ ತಾಯಿ ವೈದ್ಯರಲ್ಲಿಗೆ 3ನೇ ತರಗತಿಯಲ್ಲಿದ್ದಾಗ ಕರೆದುಕೊಂಡು ಹೋಗಿದ್ದಾಗ ದೃಷ್ಟಿದೋಷವಿರುವುದು ಖಾತರಿಯಾಯಿತು. ತಾಯಿಗೆ ಆ ಕ್ಷಣಕ್ಕೆ ಬೇಸರವಾದರೂ ಕೂಡ ಎಲ್ಲಾ ಕಷ್ಟಗಳನ್ನು ಮೆಟ್ಟಿನಿಂತು ಹೋರಾಡಲು ದೃಢಸಂಕಲ್ಪ ಮಾಡಿದ್ದರು.
ನಿಮ್ಹಾನ್ಸ್ ನ ಪುನರ್ವಸತಿ ಕೇಂದ್ರದಲ್ಲಿ ಫಿಲಿಪ್ ಕೆಲಸ ಮಾಡುತ್ತಾರೆ. ವಸತಿ ವೈದ್ಯರಿಗೆ ನೀಡಲಾದ ಹಾಸ್ಟೆಲ್ ನಲ್ಲಿ ಅವರ ವಾಸ್ತವ್ಯ. ಕಣ್ಣು ಕಾಣದಿದ್ದರೂ ಕೂಡ ಎಲ್ಲರಂತೆ ದಿನನಿತ್ಯದ ಕೆಲಸ ಮಾಡುತ್ತಾರೆ. ಕಣ್ಣು ಕಾಣಿಸುವುದಿಲ್ಲ ಎಂದು ಅಂದರೆ ಆಸ್ಪತ್ರೆಗೆ ಬರುವವರಿಗೆ ಆಶ್ಚರ್ಯವಾಗುತ್ತದೆಯಂತೆ. ತಂತ್ರಜ್ಞಾನದ ಮತ್ತು ಸಹೋದ್ಯೋಗಿಗಳ ನೆರವನ್ನು ಫಿಲಿಪ್ ಪಡೆದುಕೊಳ್ಳುತ್ತಾರೆ.
ತಮ್ಮಂತೆ ಇರುವ ಅನೇಕ ದೃಷ್ಟಿದೋಷವಂತರಿಗೆ ಕಲಿಯಲು ಕೋರ್ಸ್ ನ ಅವಶ್ಯಕತೆಯಿದೆ, ಅದರ ಕೊರತೆಯಿದೆ ಎನ್ನುತ್ತಾರೆ ಫಿಲಿಪ್. ನನಗೆ ನಿಮ್ಹಾನ್ಸ್ ನಲ್ಲಿ ಪ್ರವೇಶ ಸಿಕ್ಕಿ ವೈದ್ಯಕೀಯ ಪದವಿ ಸಿಕ್ಕಿತು. ತಮ್ಮಂತೆ ದೋಷವಿರುವ ಜನರಿಗೆ ಅವಕಾಶ ಸಿಗಬೇಕು ಎಂಬುದು ಅವರ ಅಭಿಲಾಷೆ.
ಫಿಲಿಪ್ ಅವರಿಗೆ ಇಬ್ಬರು ಸೋದರರು ಮತ್ತು ಇವರೇ ಎಲ್ಲಕ್ಕಿಂತ ಹಿರಿಯ. ಮೂವರಿಗೂ ಒಂದೇ ಕಣ್ಣಿನ ಸಮಸ್ಯೆಯಿದೆ. ಅವರ ಒಬ್ಬ ಸೋದರ ಎಂಬಿಎ ಪದವಿ ಮತ್ತು ಮತ್ತೊಬ್ಬ ಸೋದರ ದೆಹಲಿಯಲ್ಲಿ ಗಣಿತದಲ್ಲಿ ಬಿ.ಎಸ್ಸಿ ಮಾಡುತ್ತಿದ್ದಾರೆ.
ಫಿಲಿಪ್ ಅವರಿಗೆ 5 ಭಾಷೆಗಳು ಗೊತ್ತು. ದೇಶಾದ್ಯಂತ ಸಂಚರಿಸುವ ಅವರು ಗಿಟಾರ್ ಕೂಡ ಕಲಿಯುತ್ತಾರೆ. ತಮ್ಮ ನ್ಯೂನತೆಯನ್ನು ವಿಶೇಷ ಎಂದು ಯಾರು ಕೂಡ ಭಾವಿಸಿ ಸ್ಪೂರ್ತಿ ಎಂದು ಭಾವಿಸಬಾರದು ಎನ್ನುತ್ತಾರೆ. ನನ್ನನ್ನು ಸಾಮಾನ್ಯ ಜನರ ಜೊತೆ ಗುರುತಿಸಿ, ನಾವು ಕೂಡ ಎಲ್ಲರಂತೆ ಸಾಮಾನ್ಯ ಮನುಷ್ಯರು ಎಂದು ಶರದ್ ಫಿಲಿಪ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com