ಹಲ್ಲೆ ಪ್ರಕರಣ: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಫೆ.21ರ ವರೆಗೆ ಪೊಲೀಸ್ ವಶಕ್ಕೆ

ಯುವಕ ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಕಾಂಗ್ರೆಸ್ ಶಾಸಕ...
ಆರೋಪಿ ನಲಪಾಡ್
ಆರೋಪಿ ನಲಪಾಡ್
ಬೆಂಗಳೂರು: ಯುವಕ ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಸೇರಿದಂತೆ 7 ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕೋರ್ಟ್ ಫೆಬ್ರವರಿ 21ರ ವರೆಗೆ ಪೊಲೀಸರ ವಶಕ್ಕೆ ನೀಡಿದೆ.
ಕಳೆದ ಶನಿವಾರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಮೊಹಮ್ಮದ್ ನಲಪಾಡ್ ಇಂದು ಬೆಳಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಶರಣಾಗಿದ್ದ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ನಗರದ 8ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದರು. 
ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆ ಮತ್ತು ಸ್ಥಳ ಪರಿಶೀಲನೆಯ ಅಗತ್ಯವಿದೆ. ಆದ್ದರಿಂದ, ಎಲ್ಲಾ ಆರೋಪಿಗಳನ್ನು 10 ದಿನ ನಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ 10 ದಿನ ಪೊಲೀಸ್ ವಶಕಕ್ಕೆ ನೀಡಲು ನಿರಾಕರಿಸಿದ ಕೋರ್ಟ್, ಕೇವಲ ಎರಡು ದಿನ ಮಾತ್ರ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ.
ಮೊಹಮ್ಮದ್ ನಲಪಾಡ್‌ ಹ್ಯಾರೀಸ್, ಬಾಲಕೃಷ್ಣ, ಮಂಜುನಾಥ್, ಅಭಿಷೇಕ್, ಅರುಣ್ ಬಾಬು ಮತ್ತು ನಫಿ ಅಹಮದ್ ಪ್ರಕರಣದ ಆರೋಪಿಗಳಾಗಿದ್ದಾರೆ. ಎಲ್ಲಾ ಆರೋಪಿಗಳನ್ನು ಪೊಲೀಸರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಇಂದು ಆಟೋದಲ್ಲಿ ಬಂದ ನಲಪಾಡ್ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ಸಂಬಂಧ ನಿನ್ನೆ ಕಬ್ಬನ್ ಪಾರ್ಕ್ ಪೊಲೀಸರು ಐವರನ್ನು ಬಂಧಿಸಿದ್ದರು. 
ಯುಬಿ ಸಿಟಿಯಲ್ಲಿರುವ ಫೆಗ್ರಿ ಕಫೆ ರೆಸ್ಟೋರೆಂಟ್ ನಲ್ಲಿ ಫೆ.17 ರಂದು ರಾತ್ರಿ ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಎಂಬ ಯುವಕನಿಗೆ ಮನಬಂದಂತೆ ಥಳಿಸಿದ್ದಾರೆ. ಹಲ್ಲೆ ಪ್ರಕರಣ ನಂತರ ಪ್ರಮುಖ ಆರೋಪಿ ಮೊಹಮ್ಮದ್ ನಲಪಾಡ್ ನಾಪತ್ತೆಯಾಗಿದ್ದ.
ಶಾಸಕ ಹ್ಯಾರಿಸ್ ಪುತ್ರ ನಡೆಸಿದ್ದ ಹಲ್ಲೆ ಪ್ರಕರಣ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com