ಮೈಸೂರಿಗೆ ಪ್ರಧಾನಿ ಭೇಟಿ: ಹೋಟೆಲ್ ನಲ್ಲಿ ಬುಕ್ ಆಗಿದ್ದ ಕುಟುಂಬವೊಂದರ ವಿವಾಹ ಆರತಕ್ಷತೆ ವೇಳೆ ಬದಲು!

ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದಾಗಿ ಹೋಟೆಲ್ ವೊಂದರಲ್ಲಿ ವಿವಾಹ ಆರತಕ್ಷತೆಯನ್ನು ನಿಗದಿ ಪಡಿಸಿದ ಸಮಯಕ್ಕೂ ಮುನ್ನ ನಡೆಸಲಾಗಿದೆ.
ಪ್ರಧಾನಿ ಮೋದಿ ಅವರಿಗೆ ಸ್ವಾಗತ ಕೋರಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ವಜೂಬಾಯ್ ವಾಲಾ
ಪ್ರಧಾನಿ ಮೋದಿ ಅವರಿಗೆ ಸ್ವಾಗತ ಕೋರಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ವಜೂಬಾಯ್ ವಾಲಾ
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ನಿಗದಿ ಪಡಿಸಿದ ಸಮಯಕ್ಕೂ ಮುನ್ನ ವಿವಾಹ ಆರತಕ್ಷತೆ ನಡೆಸಲಾಗಿದೆ.
ಸಾಂಸ್ಕೃತಿಕ ರಾಜಧಾನಿ ಮೈಸೂರಿನ ರ್ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ಭಾನುವಾರ ರಾತ್ರಿ ಮೋದಿ ವಾಸ್ತವ್ಯ ಹೂಡಿದ್ದರು, ಭಾನುವಾರ ಸಂಜೆ ಆಭರಣ ಉದ್ಯಮಿಯೊಬ್ಬರ ಪುತ್ರನ ವಿವಾಹದ ಆರತಕ್ಷತೆಯನ್ನು ಇದೇ ಹೊಟೇಲ್ ನಲ್ಲಿ ಸಂಜೆ 7.30ರಿಂದ ರಾತ್ರಿ 12.30ರ ವರೆಗೆ ಫಿಕ್ಸ್ ಮಾಡಲಾಗಿತ್ತು. 
ಆದರೆ ಪ್ರಧಾನಿ ಮೋದಿ ವಾಸ್ತವ್ಯದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ವಿವಾಹ ಆರತಕ್ಷತೆಯನ್ನು ಮಧ್ಯಾಹ್ನ12.30 ರಿಂದ 3.30ರ ವರೆಗೆ ನಡೆಸಲಾಗಿದೆ,
ಆರತಕ್ಷತೆ ಸಮಯ ಬದಲಾವಣೆ ವಿಷಯವನ್ನು ಹೋಟೆಲ್ ಮ್ಯಾನಜೇಮೆಂಟ್ ಎಸ್ ಎಂಎಸ್ ಮೂಲಕ ಕುಟುಂಬಸ್ಥರಿಗೆ ತಿಳಿಸಿದೆ. ಆರತಕ್ಷತೆಗಾಗಿ 2 ತಿಂಗಳ ಹಿಂದೆಯೇ ಹೋಟೆಲ್ ಬುಕ್ ಮಾಡಲಾಗಿತ್ತು ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಫೆಬ್ರವರಿ 18ರಂದು ಕಾವ್ಯ ಮತ್ತು ತೇಜಸ್ ಅವರ ವಿವಾಹ ಆರತಕ್ಷತೆಯನ್ನು ರ್ಯಾಡಸನ್ ಬ್ಲೂ ಹೋಟೆಲ್ ನಲ್ಲಿ ಸಂಜೆ 7.30ಕ್ಕೆ ಆಯೋಜಿಸಲಾಗಿತ್ತು. ಆದರೆ ಮೋದಿ ಆಗಮನದ ಹಿನ್ನೆಲೆಯಲ್ಲಿ ಮಧ್ಯಾಹ್ನ 12.30ಕ್ಕೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 
ಆರತಕ್ಷತೆಯನ್ನು ಪೂರ್ವಬಾವಿಯಾಗಿ ನಡೆಸಿದ್ದರಿಂದ ವಧುವರರ ಕುಟುಂಬಸ್ಥರಿಗೆ ತೊಂದರೆಯಾಗಿದೆ, ಆ ದೊಡ್ಡ ಹೋಟೆಲ್ ಪೊಲೀಸರಿಂದಲೇ ತುಂಬಿ ಹೋಗಿತ್ತು. ಅತಿಥಿಗಳ ಕಾರು ಪಾರ್ಕಿಂಗ್ ಮಾಡಲು ಸಮಸ್ಯೆ ಎದುರಾಯಿತು ಎಂದು ಆರತಕ್ಷತೆಗೆ ಬಂದಿದ್ದ ಅತಿಥಿಯೊಬ್ಬರು ತಿಳಿಸಿದ್ದಾರೆ.
ಮಧ್ಯಾಹ್ನ 3.30 ರವೆರೆಗೂ ವಧು-ವರರ ಕುಟುಂಬಸ್ಥರು ಹೋಟೆಲ್ ನಲ್ಲಿರಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಮದುವೆಗೆ ಬಂದಿದ್ದ ಅತಿಥಿಗಳಿಗೆ ಬೇರೆ ಸ್ಟಾರ್ ಹೋಟೆಲ್ ನಲ್ಲಿ ವ್ಯವಸ್ಥೆ ಮಾಡಲಾಯಿತು. ಆದರೆ ಈ ಬಗ್ಗೆ ವಿಚಾರಿಸಿದಾಗ ಹೊಟೆಲ್ ಮ್ಯಾನೇಜ್ ಮೆಂಟ್ ಹೆಚ್ಚಿನ ವಿವರವನ್ನು ನೀಡಲಿಲ್ಲ, ಇದು ಆಂತರಿಕ ವಿಷಯ ಎಂದು ಹೇಳಿ ಕೈ ತೊಳೆದು ಕೊಂಡಿದೆ.
ಈ ಮೊದಲೇ ನಿಗದಿ ಪಡಿಸಿದ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ಮೋದಿ ವಾಸ್ತವ್ಯಕ್ಕಾಗಿ ಎಸ್ ಜಿಪಿ ಮಾಡಿದ ಮನವಿಯನ್ನು ನಿರಾಕರಿಸಲಾಯಿತು ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com