
ಮಂಗಳೂರು; ಸರಣಿ ಹಂತಕ ಸಯನೈಡ್ ಮೋಹನ್ ವಿರುದ್ಧ ಮಂಗಳೂರಿನ ಆರನೇ ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿ 28 ವರ್ಷದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಚಂತೆ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಬಂಟ್ವಾಳ ತಾಲ್ಲೂಕಿನ ಮೇಗಿನಮನೆಯ ಮಾಲಾಡಿಯ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ ಈ ತೀರ್ಪು ನೀಡಿದೆ. ಸಯನೈಡ್ ಮೋಹನ್ ವಿರುದ್ಧ ದಾಖಲಾಗಿರುವ 20 ಕೊಲೆ ಪ್ರಕರಣದಲ್ಲಿ ಇದು 5ನೇ ಕೇಸು ಆಗಿದೆ.
ಪ್ರಕರಣ: ಬೆಳ್ತಂಗಡಿ ಸಮೀಪ ಮಡಂತ್ಯಾರುಸ ಬಸ್ ನಿಲ್ದಾಣದಲ್ಲಿ ಮಾಲಾಡಿಯ ಮಹಿಳೆಯನ್ನು ಭೇಟಿ ಮಾಡಿದ್ದ ಸಯನೈಡ್ ಮೋಹನ್ ತನ್ನನ್ನು ಶಶಿಧರ್ ಪೂಜಾರಿ ಎಂದು ಪರಿಚಯಿಸಿಕೊಂಡಿದ್ದ. ಆಕೆಯ ಬಳಿಯಿಂದ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡಿದ್ದ.ನಂತರ ಆಕೆಯ ಜೊತೆ ಸ್ನೇಹ ಬೆಳೆಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ. ಒಂದು ದಿನ ಬಂಟ್ವಾಳ ತಾಲ್ಲೂಕಿನ ಬಿಸಿ ರೋಡ್ ಬಸ್ ನಿಲ್ದಾಣಕ್ಕೆ ಬರುವಂತೆ ಹೇಳಿ 2009ರ ಸೆಪ್ಟೆಂಬರ್ 24ರಂದು ಹಾಸನಕ್ಕೆ ಕರೆದುಕೊಂಡು ಹೋಗಿದ್ದನು. ಹಾಸನದಲ್ಲಿ ಗಣೇಶ್ ಲಾಡ್ಜ್ ನಲ್ಲಿ ಉಳಿದುಕೊಂಡು ಲೈಂಗಿಕ ಸಂಪರ್ಕ ನಡೆಸಿದ್ದರು.
ಮರುದಿನ ತನ್ನ ಬಳಿಯಿರುವ ಎಲ್ಲಾ ಚಿನ್ನವನ್ನು ತೆಗೆಯುವಂತೆ ಹೇಳಿದ ಮೋಹನ್ ಹತ್ತಿರದ ದೇವಸ್ಥಾನದಲ್ಲಿ ಪೂಜೆ ಮಾಡಿಸೋಣವೆಂದು ಕರೆದುಕೊಂಡು ಹೋದನು. ಆದರೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವ ಬದಲು ಹಾಸನ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಹೋದನು. ಆಕೆ ಗರ್ಭವತಿಯಾಗುವುದನ್ನು ತಡೆಯಲೆಂದು ಮಾತ್ರೆ ಕೊಡುವ ನಾಟಕವಾಡಿ ಹಾಸನ ಬಸ್ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿ ಕುಡಿಯಲು ಸಯನೈಡ್ ನೀಡಿದನು. ಆಕೆ ಮರಣ ಹೊಂದಿದ್ದು ನಿಖರವಾದ ಮೇಲೆ ಗಣೇಶ ಲಾಡ್ಜ್ ಗೆ ಮತ್ತೆ ಬಂದು ಆಕೆಯ ಆಭರಣಗಳೊಂದಿಗೆ ಕಣ್ಮರೆಯಾದನು. ಹಾಸನದಲ್ಲಿ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಆಭರಣವನ್ನು ಮಾರಾಟ ಮಾಡಿದನು.
ಪ್ರಕರಣವನ್ನು ಭೇದಿಸಿದ ಪುತ್ತೂರು ಹೆಚ್ಚುವರಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಚಂದ್ರಗುಪ್ತ ಮತ್ತು ಅವರ ತಂಡ ಮೋಹನ್ ನನ್ನು ಸೆಪ್ಟೆಂಬರ್ 21, 2010ರಲ್ಲಿ ಬಂಧಿಸಿ ನ್ಯಾಯಾಲಯದಲ್ಲಿ ಚಾರ್ಚ್ ಶೀಟ್ ಸಲ್ಲಿಸಿದರು. ನಿನ್ನೆ ಸೆಷನ್ಸ್ ನ್ಯಾಯಾಲಯದಲ್ಲಿ ಮತ್ತು 6ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ನ್ಯಾಯಾಧೀಶ ಡಿ.ಟಿ.ಪುಟ್ಟರಂಗಸ್ವಾಮಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ ಎಮ್ ಕ್ರಸ್ಟಾ ಅವರ ವಾದವನ್ನು ಎತ್ತಿಹಿಡಿದು ಮೋಹನ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದಾರೆ.
ಶಿಕ್ಷೆಯ ಪ್ರಮಾಣ ಇಂದು ಪ್ರಕಟವಾಗಲಿದೆ.
Advertisement