
ಬೆಂಗಳೂರು; ನಾಳೆಯಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಸುಮಾರು 6.90 ಲಕ್ಷ ಅಭ್ಯರ್ಥಿಗಳು ಹಾಜರಾಗುತ್ತಿದ್ದು, ಪರೀಕ್ಷೆ ವೇಳೆ ಯಾವುದೇ ಅಕ್ರಮ ನಡೆಯದಂತೆ ಸಿಸಿಟಿವಿ ಕಣ್ಗಾವಲು ಇರಿಸಲಾಗುತ್ತಿದೆ. ಅಲ್ಲದೆ ಪಿಯುಸಿ ಶಿಕ್ಷಣ ಇಲಾಖೆ ಅನೇಕ ಹೊಸ ಕ್ರಮಗಳನ್ನು ತೆಗೆದುಕೊಂಡಿದೆ.
ರಾಜ್ಯಾದ್ಯಂತ ಸರ್ಕಾರಿ ಪಿಯು ಕಾಲೇಜುಗಳು ಸೇರಿದಂತೆ 1,0004 ಪರೀಕ್ಷಾ ಕೇಂದ್ರಗಳಿದ್ದು, ಯಾವುದೇ ಅಕ್ರಮ ನಡೆಯದಂತೆ ಸಿಸಿಟಿವಿ ಕ್ಯಾಮರಾಗಳನ್ನು ಇರಿಸಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲದೆ ಜಿಲ್ಲಾ ಮತ್ತು ತಾಲ್ಲೂಕು ಖಜಾನೆಗಳಲ್ಲಿ ಪರೀಕ್ಷಾ ಪತ್ರಿಕೆಗಳನ್ನು ಇಟ್ಟ ಕಡೆ ಕೂಡ ಸಿಸಿಟಿವಿ ಕ್ಯಾಮರಾಗಳನ್ನು ಇರಿಸಲಾಗಿದೆ.
ಖಜಾನೆಗಳಲ್ಲಿರುವ ಸಿಸಿಟಿವಿ ಕ್ಯಾಮರಾಗಳನ್ನು ಪಿಯು ಇಲಾಖೆಯ ನಿರ್ದೇಶಕರು ಮತ್ತು ಜಿಲ್ಲಾ ಆಯುಕ್ತರ ಮೊಬೈಲ್ ಕ್ಯಾಮರಾಗಳಿಗೆ ಸಂಪರ್ಕಿಸಲಾಗಿದೆ. ಯಾವುದೇ ಬೆದರಿಕೆ ಅಥವಾ ತುರ್ತು ಪರಿಸ್ಥಿತಿಗಳಲ್ಲಿ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿಗಳಿಗೆ ಸಂದೇಶ ಕಳುಹಿಸಲಾಗುತ್ತದೆ.
2016ರಲ್ಲಿ ಸಾಮೂಹಿಕ ಪ್ರಶ್ನೆಪತ್ರಿಕೆ ಸೋರಿಕೆ ನಂತರ ಪದವಿಪೂರ್ವ ಶಿಕ್ಷಣ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದ್ದು ಕಳೆದ ವರ್ಷ ಕೂಡ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಸಿಸಿಟಿವಿ ಕ್ಯಾಮರಾಗಳಲ್ಲದೆ ಎಲ್ಲಾ ಪರೀಕ್ಷಾ ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ದಾಖಲಾತಿ ಮಾಡಲು ನಿರ್ದೇಶನ ನೀಡಲಾಗಿದೆ.ಇದೇ ಮೊದಲ ಬಾರಿಗೆ ಪರೀಕ್ಷಾ ಕೆಲಸಕ್ಕೆ ಬಳಸುವ ಎಲ್ಲಾ ವಾಹನಗಳಿಗೆ ಜಿಪಿಎಸ್ ನ್ನು ನಿಯೋಜಿಸಲಾಗಿದೆ.
ಅಧಿಕಾರಿಗಳ ದೂರವಾಣಿಗಳನ್ನು ತಪಾಸಣೆ ಮಾಡಲಿರುವ ಸಿಐಡಿ: ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗೆ ನಿಯೋಜನೆಗೊಂಡಿರುವ ಎಲ್ಲಾ ಅಧಿಕಾರಿಗಳ ಫೋನ್ ಗಳನ್ನು ಸಿಐಡಿ ಅಧಿಕಾರಿಗಳು ತಪಾಸಣೆ ಮಾಡಲಿದ್ದಾರೆ. 2016ರಲ್ಲಿ ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಾದ ನಂತರ ಪರೀಕ್ಷೆ ಎರಡು ಬಾರಿ ಮುಂದೂಡಲ್ಪಟ್ಟಿತ್ತು. ಕೇಸನ್ನು ನಿರ್ವಹಿಸುತ್ತಿರುವ ಸಿಐಡಿ ಸಿಬ್ಬಂದಿಗಳ ಮೊಬೈಲ್ ಸಂಖ್ಯೆಗಳ ಮೇಲೆ ನಿಗಾವಹಿಸಲಿದೆ. ಸಿಬ್ಬಂದಿಗಳ ಪಟ್ಟಿಯನ್ನು ಪಿಯುಸಿ ಇಲಾಖೆಯಿಂದ ಕೇಳಲಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿದುಬಂದಿದೆ.
ಅಭ್ಯರ್ಥಿಗಳಿಗೆ ಉಚಿತ ಬಸ್ ಸೇವೆ: ಪರೀಕ್ಷಾ ಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಕೆಎಸ್ಆರ್ ಟಿಸಿ ಉಚಿತ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸಿದೆ. ಈ ಸೌಲಭ್ಯವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೊಠಡಿ ಪ್ರವೇಶ ಪತ್ರವನ್ನು ಬಸ್ ನಿರ್ವಾಹಕರಿಗೆ ತೋರಿಸಬೇಕು.
Advertisement