ಇನ್ಮುಂದೆ ಇಂದಿರಾ ಕ್ಯಾಂಟೀನ್ ನಲ್ಲಿ ಪಾಯಸ, ರಾಗಿ ಮುದ್ದೆಯೂ ಲಭ್ಯ
ಬೆಂಗಳೂರು: ಅಗ್ಗದ ದರದಲ್ಲಿ ನಗರದ ಜನತೆಗೆ ಆಹಾರಗಳನ್ನು ಒದಗಿಸುತ್ತಿದ್ದ ಇಂದಿರಾ ಕ್ಯಾಂಟೀನ್ ನಲ್ಲಿ ಇನ್ನು ಮುಂದೆ ಗ್ರಾಹಕರು ವೈವಿಧ್ಯ ಆಹಾರಗಳನ್ನು ಸವಿಯಬಹುದು. ಇಂದಿನಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಮೆನುಗಳ ಸಂಖ್ಯೆ ಏರಿಕೆಯಾಗಲಿದೆ. ಮೆನುವಿನಲ್ಲಿ ಪುಲಾವ್, ಆಲೂ ಕುರ್ಮ, ಪಾಯಸ, ರಾಗಿ ಮುದ್ದೆ ಇರಲಿದೆ ಎಂದು ನಿನ್ನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಸಂಪತ್ ರಾಜ್ ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ ಗೆ ಜನರಿಂದ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ಬಿಬಿಎಂಪಿ ಇನ್ನಷ್ಟು ಮೆನುವನ್ನು ಸೇರಿಸಲು ಮುಂದಾಗಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಂಡ ನಂತರ ಇಲ್ಲಿಯವರೆಗೆ ಸುಮಾರು 3.29 ಕೋಟಿ ಜನರು ಆಹಾರ ಸೇವಿಸಿದ್ದಾರೆ ಎಂದು ಇತ್ತೀಚೆಗೆ ಸದನದಲ್ಲಿ ನಗರಾಭಿವೃದ್ಧಿ ಸಚಿವ ಆರ್,ರೋಶನ್ ಬೇಗ್ ತಿಳಿಸಿದ್ದರು.
ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಂಡ ನಂತರ ಆರಂಭಿಕ ತಿಂಗಳುಗಳಲ್ಲಿ ಬೆಳಗಿನ ಉಪಹಾರ, ಊಟ ಮತ್ತು ರಾತ್ರಿಯ ಭೋಜನ ಸೇರಿ 400ಮಂದಿ ಗ್ರಾಹಕರಿಗೆ ನೀಡಬೇಕೆಂದು ನಿರ್ಬಂಧವಿದ್ದಿತು. ನಂತರ ಆ ನಿರ್ಬಂಧವನ್ನು ತೆಗೆದುಹಾಕಿ ಇಂದು ಕೆಲವು ಇಂದಿರಾ ಕ್ಯಾಂಟೀನ್ ಗಳು ದಿನಕ್ಕೆ 1,200 ಗ್ರಾಹಕರಿಗೆ ಆಹಾರವನ್ನು ಒದಗಿಸಿತ್ತು ಎಂದು ರೋಶನ್ ಬೇಗ್ ಸದನದಲ್ಲಿ ಲಿಖಿತ ಉತ್ತರ ನೀಡಿದ್ದರು.
ಗ್ರಾಮೀಣ ಭಾಗಗಳಲ್ಲಿ ಇಂದಿರಾ ಕ್ಯಾಂಟೀನ್ ಇಲ್ಲ: 24 ಮೊಬೈಲ್ ಕ್ಯಾಂಟೀನ್ ಗಳು, 190 ಇಂದಿರಾ ಕ್ಯಾಂಟೀನ್ ಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದೆ. ಜಾಗ ಸಿಕ್ಕಿದ ಕೂಡಲೇ ಉಳಿದ ಎಂಟು ವಾರ್ಡ್ ಗಳಲ್ಲಿ ಕ್ಯಾಂಟೀನ್ ಗಳನ್ನು ಸ್ಥಾಪಿಸಲಾಗುವುದು ಎಂದು ಬಿಬಿಎಂಪಿ ಮೇಯರ್ ತಿಳಿಸಿದ್ದಾರೆ. ನಗರ ಪಾಲಿಕೆ ಸಹಾಯದಿಂದ ಎಲ್ಲಾ ಜಿಲ್ಲೆಗಳು ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪಿಸಲು ಯೋಜನೆ ಮಾಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಕ್ಯಾಂಟೀನ್ ಗಳನ್ನು ಸ್ಥಾಪಿಸುವ ಯಾವುದೇ ಮುಂದಾಲೋಚನೆಯಿಲ್ಲ ಎಂದು ರೋಶನ್ ಬೇಗ್ ತಿಳಿಸಿದ್ದಾರೆ.

