ಎಲ್ಲಾ ವರ್ಗದ ಬಡ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್: ಮುಖ್ಯಮಂತ್ರಿ ಸಿದ್ದರಾಮಯ್ಯ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿರುವ .....
ವಿಧಾನಸೌಧ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ನಿನ್ನೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಧಾನಸೌಧ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ನಿನ್ನೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿರುವ ಲ್ಯಾಪ್‌ಟಾಪ್‌ ಭಾಗ್ಯವನ್ನು ಇನ್ನು ಮುಂದೆ ಸಾಮಾನ್ಯ ವರ್ಗ ಸೇರಿದಂತೆ ಇತರ ಹಿಂದುಳಿದ ವರ್ಗಗಳ ಎಲ್ಲಾ ಪದವಿ ವಿದ್ಯಾರ್ಥಿಗಳಿಗೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ನಿನ್ನೆ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ಲ್ಯಾಪ್‌ಟಾಪ್‌ ನೀಡುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಪ್ರಥಮ ಪದವಿ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಸ್‌ಸಿ- ಎಸ್‌ಟಿ ಸಮುದಾಯದ 31,742 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಲಾಗಿದ್ದು, ಇನ್ನೂ 1.50 ಲಕ್ಷ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಬಡ ಕುಟುಂಬದಿಂದ ಬಂದ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚು ಉಪಯೋಗವಾಗಲಿದೆ. ಅವರ ಪೋಷಕರಿಗೆ ಲ್ಯಾಪ್‌ಟಾಪ್‌ ಕೊಡಿಸುವಷ್ಟು ಆರ್ಥಿಕ ಶಕ್ತಿ ಇರುವುದಿಲ್ಲ. ಬಡ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಜೆಟ್‌ನಲ್ಲಿ ಕಾರ್ಯಕ್ರಮ ಘೋಷಿಸಿದ್ದೆ. ಅದನ್ನು ಜಾರಿ ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯಾದ್ಯಂತ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪಂಗಡದ 31 ಸಾವಿರದ 742 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಗುತ್ತಿದ್ದು, ಇದರ ಮಾರುಕಟ್ಟೆ ದರ 21 ಸಾವಿರದ 399 ರೂಪಾಯಿ ಆಗಿದ್ದು, ಸರ್ಕಾರ ಇದನ್ನು 14 ಸಾವಿರ ರೂಪಾಯಿಯಂತೆ ಖರೀದಿಸಿದೆ.
ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಆರ್ಥಿಕವಾಗಿ ಹಿಂದುಳಿದ ಅನ್ಯ ಸಮುದಾಯದ 1 ಲಕ್ಷ 82 ಸಾವಿರ ಪದವಿ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಸಹ ಉಚಿತ ಲ್ಯಾಪ್ ಟಾಪ್ ನೀಡಲು ಟೆಂಡರ್ ಕರೆಯಲಾಗಿದೆ. ಅವರಿಗೂ
ಇಷ್ಟರಲ್ಲೇ ಉಚಿತ ಲ್ಯಾಪ್ ಟಾಪ್ ವಿತರಿಸಲಾಗುವುದು ಎಂದು ತಿಳಿಸಿದರು.
ಶ್ರೀಮಂತ ವಿದ್ಯಾರ್ಥಿಗಳಿಗೆ ಲಭ್ಯವಾಗುವ ಅವಕಾಶಗಳು ಬಡ ವಿದ್ಯಾರ್ಥಿಗಳಿಗೂ ದೊರೆಯುವಂತಾಗಲು ಉಚಿತ ಲ್ಯಾಪ್ ಟಾಪ್ ಯೋಜನೆ ಜಾರಿಗೆ ತರಲಾಗಿದೆ. ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಜ್ಞಾನಾಭಿವೃದ್ಧಿಗೆ ಪ್ರಯತ್ನಿಸಬೇಕೆಂದು ಮುಖ್ಯಮಂತ್ರಿ ಕಿವಿಮಾತು ಹೇಳಿದರು. 
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಉತ್ತಮ ಗುಣ ಮಟ್ಟದ ಬ್ರ್ಯಾಂಡೆಡ್‌ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ. 22 ಸಾವಿರ ರೂ.ಬೆಲೆಬಾಳುವ ಲ್ಯಾಪ್‌ಟಾಪ್‌ಗಳನ್ನು ಟೆಂಡರ್‌ನಲ್ಲಿ 14,500 ರೂ.ಗೆ ಖರೀದಿಸಿ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳ ಪರವಾದ ಸರ್ಕಾರ ನಮ್ಮದು. ಪರಿಶಿಷ್ಟರಲ್ಲದ ಇತರೆ ವಿದ್ಯಾರ್ಥಿಗಳಿಗೂ 1.50 ಲಕ್ಷ ರೂ.ಮೌಲ್ಯದ ಲ್ಯಾಪ್‌ಟಾಪ್‌ಗ್ಳನ್ನ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com