ಅಗ್ನಿಶಾಮಕ ಇಲಾಖೆಯಿಂದ ಎನ್ಒಸಿ ಸಿಗದಿದ್ದರೆ ವ್ಯಾಪಾರ ಪರವಾನಗಿ ಇಲ್ಲ

ಎರಡು ದಿನಗಳ ಹಿಂದೆ ಕೈಲಾಶ್ ಬಾರ್ ಅಂಡ್ ರೆಸ್ಟೊರೆಂಟ್ ನಲ್ಲಿ ಅಗ್ನಿ ....
ಕಲಾಸಿಪಾಳ್ಯದ ಕೈಲಾಶ್ ಬಾರ್ ನಲ್ಲಿ ಉಂಟಾದ ಅಗ್ನಿ ಅವಘಡದ ನಂತರ ಸ್ಥಳಕ್ಕೆ ಭೇಟಿ ನೀಡಿದ ಬೆಸ್ಕಾಂ ಮತ್ತು ಪೊಲೀಸ್ ಅಧಿಕಾರಿಗಳು
ಕಲಾಸಿಪಾಳ್ಯದ ಕೈಲಾಶ್ ಬಾರ್ ನಲ್ಲಿ ಉಂಟಾದ ಅಗ್ನಿ ಅವಘಡದ ನಂತರ ಸ್ಥಳಕ್ಕೆ ಭೇಟಿ ನೀಡಿದ ಬೆಸ್ಕಾಂ ಮತ್ತು ಪೊಲೀಸ್ ಅಧಿಕಾರಿಗಳು
ಬೆಂಗಳೂರು: ಎರಡು ದಿನಗಳ ಹಿಂದೆ ಕೈಲಾಶ್ ಬಾರ್ ಅಂಡ್ ರೆಸ್ಟೊರೆಂಟ್ ನಲ್ಲಿ ಅಗ್ನಿ ಅವಘಡವುಂಟಾಗಿ 5 ಮಂದಿ ಸಜೀವ ದಹನವಾದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಅಗ್ನಿ ಮತ್ತು ತುರ್ತು ಸೇವಾ ಇಲಾಖೆ, ಅಗ್ನಿ ಸುರಕ್ಷತಾ ಕ್ರಮ ಅಳವಡಿಸಿ ಪರವಾನಗಿ ಪಡೆದುಕೊಳ್ಳುವವರೆಗೆ ವಾಣಿಜ್ಯ ಮಳಿಗೆಗಳಿಗೆ ವ್ಯಾಪಾರ ಪರವಾನಗಿ ನೀಡದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಶಿಫಾರಸು ಮಾಡಿದೆ.
ಅಗ್ನಿಶಾಮಕ ಸುರಕ್ಷತೆ ಕ್ರಮಗಳನ್ನು ಗಾಳಿಗೆ ತೂರಿ ಬಹುತೇಕ ವಾಣಿಜ್ಯ ಮಳಿಗೆಗಳು ನಗರದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ನಗರದಲ್ಲಿ ಇಂತಹ ಅನೇಕ ವಾಣಿಜ್ಯ ಕಟ್ಟಡಗಳು ಅಗ್ನಿಶಾಮಕ ಸುರಕ್ಷತಾ ಕ್ರಮಗಳನ್ನು ಹೊಂದಿಲ್ಲ. ಆದರೂ ಕೂಡ ಬಿಬಿಎಂಪಿಯಿಂದ ವ್ಯಾಪಾರ ಪರವಾನಗಿ ಪಡೆದುಕೊಂಡಿರುತ್ತವೆ. ಇಲ್ಲಿ ಸರಿಯಾದ ನಿಗಾಕ್ರಮ ಇಲ್ಲದಿರುವುದರಿಂದ ಇಂತಹ ಘಟನೆಗಳು ನಡೆಯುತ್ತವೆ. ಹೀಗಾಗಿ ನಾವು ಬಿಬಿಎಂಪಿ ಅಧಿಕಾರಿಗಳಿಗೆ ನೀತಿ ನಿಯಮಗಳಲ್ಲಿ ಬದಲಾವಣೆ ಮಾಡುವಂತೆ ಶಿಫಾರಸು ಮಾಡಿದ್ದೇವೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಪೊಲೀಸ್ ಮಹಾ ನಿರ್ದೇಶಕ(ಅಗ್ನಿ ಮತ್ತು ತುರ್ತು ಸೇವೆ ಇಲಾಖೆ)ಯ ಎಂ.ಎನ್.ರೆಡ್ಡಿ, ವ್ಯಾಪಾರ ಪರವಾನಗಿ ನೀಡುವಾಗ ನೀತಿಯಲ್ಲಿ ಕೆಲವು ಬದಲಾವಣೆ ಮಾಡುವಂತೆ ನಾವು ಬಿಬಿಎಂಪಿಗೆ ಶಿಫಾರಸು ಮಾಡಿದ್ದೇವೆ. ವ್ಯಾಪಾರ ಪರವಾನಗಿ ಪಡೆದುಕೊಳ್ಳುವ ಮುನ್ನ ವಾಣಿಜ್ಯ ಮಳಿಗೆಗಳಿಗೆ ಅಗ್ನಿ ಶಾಮಕ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಲಾಗುವುದು ಎಂದು ಹೇಳಿದರು.
ಅಗ್ನಿಶಾಮಕ ಇಲಾಖೆಯಿಂದ ಎನ್ ಒಸಿ(ನೊ ಒಬ್ಜೆಕ್ಷನ್ ಸರ್ಟಿಫಿಕೇಟ್) ಪಡೆಯದೆ ಅತಿ ಎತ್ತರದವರೆಗೆ ಕಟ್ಟಡವನ್ನು ಹೊಂದಿರುವ ಇಂದಿರಾನಗರ ಮತ್ತು ಕೋರಮಂಗಲದ 6 ಕಟ್ಟಡಗಳು ಮತ್ತು 12 ಪಬ್ ಮತ್ತು ಬಾರ್ ಗಳಿಗೆ ಪೊಲೀಸ್ ಇಲಾಖೆ ನೊಟೀಸ್ ಕಳುಹಿಸಿದೆ.
ಇತ್ತೀಚೆಗೆ ಮುಂಬೈಯ ಕಮಲಾ ಮಿಲ್ಸ್ ನಲ್ಲಿ ರೂಫ್ ಟಾಪ್ ಪಬ್ ಮೇಲೆ ನಡೆದ ಅಗ್ನಿ ದುರಂತದ ನಂತರ ಅಗ್ನಿಶಾಮಕ ಇಲಾಖೆ, ಬಿಬಿಎಂಪಿ ಸಹಯೋಗದೊಂದಿಗೆ ಪಬ್ ಮತ್ತು ಬಾರ್ ಗಳ ಅಗ್ನಿ ಸುರಕ್ಷತಾ ಲೆಕ್ಕವರದಿಯನ್ನು ನಡೆಸಿದ್ದು, ಅದರ ಪ್ರಕಾರ ಕಳೆದ ತಿಂಗಳು 30ರಂದು 12 ಪಬ್ ಗಳಿಗೆ ನೊಟೀಸ್ ಜಾರಿ ಮಾಡಿ 15 ದಿನಗಳೊಳಗೆ ಅಗ್ನಿಶಾಮಕ ಸುರಕ್ಷತಾ ಕ್ರಮಗಳನ್ನು ಅಳವಡಿಸುವಂತೆ ಆದೇಶಿಸಲಾಗಿತ್ತು. ನಿಯಮ ಪಾಲಿಸದಿದ್ದಲ್ಲಿ ಪಬ್ ಗಳನ್ನು ಮುಚ್ಚುವುದಾಗಿ ಎಚ್ಚರಿಕೆ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com