ಸರ್ಕಾರಿ ಶಾಲೆಗಳಿಗೆ ಉಚಿತ ಸೌರ ವಿದ್ಯುತ್: ಇಂಧನ ಸಚಿವ ಡಿಕೆಶಿ ಭರವಸೆ

ಸೌರ ವಿದ್ಯುತ್ ಯೋಜನೆಗಳಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಪೂರೈಕೆಗೆ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸೌರ ವಿದ್ಯುತ್ ಯೋಜನೆಯಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಪೂರೈಕೆಗೆ ಇಂಧನ ಇಲಾಖೆ ಮುಂದಾಗಿದೆ. 
ಈ ವಿಷಯವನ್ನು ಸ್ವತಃ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆಯ ಆಯೋಗಕ್ಕೆ ತಿಳಿಸಿದ್ದಾರೆ. ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಅವರು ಪತ್ರ ಬರೆದು ಸಲ್ಲಿಸಿದ್ದ ಮನವಿಗೆ ಸಚಿವರು ಸ್ಪಂದಿಸಿದ್ದಾರೆ. 
ಸಚಿವ ಡಿಕೆ ಶಿವಕುಮಾರ್ ತಮ್ಮ ಹೇಳಿಕೆಯಲ್ಲಿ, ಸರ್ಕಾರಿ ಶಾಲೆಗಳಲ್ಲಿನ ವಿದ್ಯುತ್ ದರ ಪಾವತಿಸುವುದಕ್ಕೆ ಬೇರೆ ಮಾರ್ಗಗಳಿಲ್ಲದಿರುವಾಗ, ಸೌರ ವಿದ್ಯುತ್ ನ್ನು ಉಚಿತವಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ಬಗ್ಗೆ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಸಚಿವರು ಪತ್ರ ಬರೆದಿದ್ದು ಸೌರ ವಿದ್ಯುತ್ ಯೋಜನೆಗಳಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಪೂರೈಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಾವು ಸಚಿವರಿಂದ ಪತ್ರ ಸ್ವೀಕರಿಸಿದ್ದು, ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸದ್ಯದಲ್ಲಿಯೇ ಯೋಜನೆ ಅಂತಿಮಗೊಳಿಸಲಾಗುವುದು ಎಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ, ಇತ್ತೀಚೆಗೆ ಸರ್ಕಾರಿ ಶಾಲೆಗಳಿಗೆ ತಪಾಸಣೆ ಮಾಡಲು ಭೇಟಿ ನೀಡಿದ್ದ ಸಂದರ್ಭದಲ್ಲಿ ಶಾಲೆಗಳಲ್ಲಿ ವಿದ್ಯುತ್ ಬಿಲ್ ಪಾವತಿಸಲು ಹಣವಿಲ್ಲದಿರುವುದು ಅವರ ಗಮನಕ್ಕೆ ಬಂತು. ಈಗಿರುವ ವ್ಯವಸ್ಥೆಯೊಳಗೆ ಯಾವುದೇ ಹಣವಿಲ್ಲ. ಶಾಲೆಗಳ ವಿದ್ಯುತ್ ಬಿಲ್ ಗಳನ್ನು ಶಾಲಾ ಅಭಿವೃದ್ಧಿ ಮತ್ತು ವ್ಯವಸ್ಥಾಪಕ ಸಮಿತಿಯೇ ಶಿಕ್ಷಕರ ಹಣದಿಂದ ಭರಿಸುತ್ತಿದೆ ಎಂದು ಕೃಪಾ ಆಳ್ವ ಹೇಳುತ್ತಾರೆ.
ಹಲವು ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮಗೆ ಉಚಿತ ವಿದ್ಯುತ್ ಪೂರೈಸಬೇಕೆಂದು ಒತ್ತಾಯಪಡಿಸಿದ ಹಿನ್ನೆಲೆಯಲ್ಲಿ ಈ ವಿಷಯವನ್ನು ಇಂಧನ ಸಚಿವರ ಗಮನಕ್ಕೆ ತಂದೆನು. ಅದಕ್ಕೆ ಅವರು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಆಳ್ವ ತಿಳಿಸಿದ್ದಾರೆ. 
ರಾಜ್ಯದಲ್ಲಿ 43,000 ಸರ್ಕಾರಿ ಶಾಲೆಗಳಿದ್ದು ಸೌರ ವಿದ್ಯುತ್ ಫಲಕಗಳಿಂದ ಈ ಶಾಲೆಗಳಿಗೆ ಉಚಿತ ವಿದ್ಯುತ್ ಒದಗಿಸಲು ಇಂಧನ ಇಲಾಖೆ ಮುಂದಾಗಿದೆ.
ಸರ್ಕಾರಿ ಶಾಲೆಗಳಲ್ಲಿ ವಿದ್ಯುತ್ ದರ ಪಾವತಿಸದ ಕಾರಣ ಅನೇಕ ಶಾಲೆಗಳಲ್ಲಿ ಫ್ಯಾನ್ ಗಳು, ಕಂಪ್ಯೂಟರ್ ಗಳ ಬಳಕೆ ಮಾಡದೆ ಮೂಲೆಯಲ್ಲಿರಿಸಿರುವುದು ಸಹ ಕೃಪಾ ಆಳ್ವ ಅವರ ಭೇಟಿ ಸಂದರ್ಭದಲ್ಲಿ ಅವರ ಗಮನಕ್ಕೆ ಬಂದಿದೆ. ಉತ್ತರ ಕರ್ನಾಟಕ ಜಿಲ್ಲೆಗಳ ಹಲವು ಶಾಲೆಗಳಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ಬೇಸಿಗೆ ಕಾಲದಲ್ಲಿ ಬಿಸಿಲು ವಿಪರೀತವಾಗಿದ್ದರೂ ಕೂಡ ಫ್ಯಾನ್ ಗಳನ್ನು ಚಲಾಯಿಸದೆ ಇರಬೇಕಾದ ಪರಿಸ್ಥಿತಿಯಿದೆ.
ಈ ಬಗ್ಗೆ ಶಿಕ್ಷಕರನ್ನು ವಿಚಾರಿಸದರೆ ತಮಗೆ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಿಲ್ಲ. ಹಾಗಾಗಿ ಫ್ಯಾನ್ ಬಳಕೆ ಮಾಡುವುದಿಲ್ಲ ಎನ್ನುತ್ತಾರೆ ಎಂದು ಕೃಪಾ ಆಳ್ವ ಜೊತೆಗೆ ಶಾಲೆಗಳಿಗೆ ಭೇಟಿ ನೀಡಿದ ಆಯೋಗದ ಸದಸ್ಯರೊಬ್ಬರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com