ಬೆಂಗಳೂರು: ಜ.31 ರಂದು ಬೆಂಗಳೂರಿನಲ್ಲಿ ಹತ್ಯೆಯಾಗಿದ್ದ ಸಂತೋಷ್ ಬಿಜೆಪಿ ಕಾರ್ಯಕರ್ತನೂ ಅಲ್ಲ ಹಿಂದೂ ಕಾರ್ಯಕರ್ತನೂ ಅಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಪ್ರಕರಣದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಗೃಹ ಸಚಿವರು ಹತ್ಯೆಯಾಗಿರುವ ಸಂತೋಷ್ ಹಾಗೂ ಹತ್ಯೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ವಾಸಿಂ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. 2-3 ತಿಂಗಳ ಹಿಂದೆ ಅವರ ನಡುವೆ ವೈಮನಸ್ಸು ಮೂಡಿತ್ತು. ಆದ್ದರಿಂದ ಇದು ರಾಜಕೀಯಕ್ಕಾಗಿ ನಡೆದ ಕೊಲೆಯಲ್ಲ ಎಂದು ಹೇಳಿದ್ದಾರೆ.
ಹತ್ಯೆಯಾಗಿರುವ ಸಂತೋಷ್ ಬಿಜೆಪಿ ಕಾರ್ಯಕರ್ತನೂ ಅಲ್ಲ ಹಿಂದೂ ಕಾರ್ಯಕರ್ತನೂ ಅಲ್ಲ, ಸತ್ತ ಮೇಲೆ ಸತ್ತವರನ್ನೆಲ್ಲಾ ತನ್ನ ಕಾರ್ಯಕರ್ತರು ಎಂದು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಬಿಜೆಪಿ ರಾಜ್ಯದಲ್ಲಿ ಹೊಸ ಪರಂಪರೆ ಸೃಷ್ಟಿಸಿದೆ ಎಂದು ರೆಡ್ಡಿ ಹೇಳಿದ್ದಾರೆ.
ವಾಸಿಂ ಹಾಗೂ ಸಂತೋಷ್ ನಡುವೆ ವೈಮನಸ್ಸು ಮೂಡಿದ್ದು ಸ್ಕ್ರೂಡ್ರೈವರ್ ನಿಂದ ಕಾಲಿಗೆ ಚುಚ್ಚಲಾಗಿತ್ತು, ತೀವ್ರ ರಕ್ತಸ್ರಾವದಿಂದ ಸಂತೋಷ್ ಸಾವನ್ನಪ್ಪಿದ್ದಾನೆ. ಸಂತೋಷ್ ನನ್ನು ಹತ್ಯೆ ಮಾಡುವ ಉದ್ದೇಶ ಇರಲಿಲ್ಲ ಎಂದಿರುವ ರಾಮಲಿಂಗಾ ರೆಡ್ಡಿ ಸಂತೋಷ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ್ದಾರೆ.