ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನ: ಇಸ್ರೇಲ್ ಕೃಷಿ ಪದ್ಧತಿ ಬಗ್ಗೆ ಸ್ಪಷ್ಟತೆ ಬೇಕು- ರಾಜ್ಯಪಾಲ ವಜೂಭಾಯಿ ವಾಲಾ

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪೂರ್ಣ ಪ್ರಮಾಣದ ಚೊಚ್ಚಲ ಅಧಿವೇಶನ ಸೋಮವಾರ ಆರಂಭವಾಗಿದ್ದು,...
ರಾಜ್ಯಪಾಲ ವಜುಭಾಯಿ ವಾಲಾ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುತ್ತಿರುವುದು
ರಾಜ್ಯಪಾಲ ವಜುಭಾಯಿ ವಾಲಾ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುತ್ತಿರುವುದು

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪೂರ್ಣ ಪ್ರಮಾಣದ ಚೊಚ್ಚಲ ಅಧಿವೇಶನ ಸೋಮವಾರ ಆರಂಭವಾಗಿದ್ದು, ಮೊದಲಿಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು.

ಎರಡೂ ಸದನಗಳ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಥಿರ ಮತ್ತು ಅಭಿವೃದ್ಧಿಪರ ಆಡಳಿತವನ್ನು ಹೊಂದಿರುವ ಸರ್ಕಾರವಿದ್ದು ಕಾನೂನು ಸುವ್ಯವಸ್ಥೆ ತೃಪ್ತಿಕರವಾಗಿದೆ ಎಂದು ಹೇಳಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಯೋಜನೆಗಳ ಬಗ್ಗೆ ಹೆಚ್ಚು ಸ್ಪಷ್ಟತೆ ಮತ್ತು ವಿವರಣೆಗಳು ರಾಜ್ಯಪಾಲರ ಭಾಷಣದಲ್ಲಿ ಇರಲಿಲ್ಲ. ಬದಲಿಗೆ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ್ದು ಕಾಂಗ್ರೆಸ್ ನ ಪ್ರಭಾವ ಅವರ ಭಾಷಣದಲ್ಲಿ ಹೆಚ್ಚು ಕಂಡುಬಂತು.

ಹಿಂದಿನ ಸರ್ಕಾರ ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಜಾರಿಗೆ ತರುವುದಾಗಿ ಹೇಳಿದ್ದರ ಬಗ್ಗೆ ತಮ್ಮ ಭಾಷಣದಲ್ಲಿ ವಿಶೇಷವಾಗಿ ಉಲ್ಲೇಖ ಮಾಡಿದ ರಾಜ್ಯಪಾಲರು, ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯ ವಿಧಾನಗಳು ಹೇಗೆ, ಅದರಿಂದ ಇಲ್ಲಿಯ ರೈತರಿಗೆ ಹೇಗೆ ಉಪಯೋಗವಾಗುತ್ತದೆ, ಹೇಗೆ ಜಾರಿಗೆ ತರಲಾಗುತ್ತದೆ ಎಂಬ ಬಗ್ಗೆ ಹೆಚ್ಚಿನ ಸ್ಪಷ್ಟತೆ ಬೇಕು ಎಂದು ಹೇಳಿದ್ದಾರೆ.

ಸುಮಾರು 19 ಪುಟಗಳ ಸುದೀರ್ಘ ಭಾಷಣವನ್ನು ರಾಜ್ಯಪಾಲ ವಿಆರ್ ವಾಲಾ ಅವರು ಮಾಡಿದರೂ ಕೂಡಾ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಸಾಲಮನ್ನಾದ ವಿಚಾರ ಭಾಷಣದಲ್ಲಿ ಪ್ರಸ್ತಾಪ ಆಗಿಲ್ಲ. ಆದರೆ ಪರೋಕ್ಷವಾಗಿ ರೈತರ ಸಾಲಮನ್ನಾದ ಬಗ್ಗೆ ಸುಳಿವು ನೀಡಿದೆ. ರೈತರೇ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ರೈತರ ಸಮಸ್ಯೆ ನಿವಾರಣೆಗೆ ನನ್ನ ಸರ್ಕಾರ ಬದ್ಧವಾಗಿದೆ. ಅಲ್ಲದೇ ರೈತರು ಇಸ್ರೇಲ್ ಮಾದರಿಯ ಕೃಷಿಯನ್ನು ಅನುಸರಿಸಬೇಕು. ಇದಕ್ಕೆ ಬೇಕಾದ ಪೂರಕ ವಾತಾವರಣವನ್ನು ಸರ್ಕಾರ ಕಲ್ಪಿಸಿಕೊಡಲಿದೆ ಎಂದು ಹೇಳಿದರು.

ಶಾಸಕರಿಗೆ ಕಿವಿಮಾತು ಹೇಳಿದ ರಾಜ್ಯಪಾಲರು, ಬಹುತೇಕ ಶಾಸಕರು ಹೊಸದಾಗಿ ಸದನ ಪ್ರವೇಶಿಸಿದ್ದೀರಿ. ಸುಮಾರು 100 ಸದಸ್ಯರು ಹೊಸದಾಗಿ ಆಯ್ಕೆಯಾಗಿ ಬಂದಿದ್ದೀರಿ. ಜಂಟಿ ಅಧಿವೇಶನಕ್ಕೆ ನಿಮಗೆಲ್ಲರಿಗೂ ಸ್ವಾಗತ ಕೋರುತ್ತೇನೆ. ಹೊಸ ಸದಸ್ಯರಿಗೆ ಅನುಭವಿ ಸದಸ್ಯರು ಮಾದರಿಯಾಗಬೇಕು ಎಂದು ಹೇಳಿದ್ದಲ್ಲದೆ, ಹೊಸ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಜನರ ರಕ್ಷಣೆಗೆ ಸರಕಾರ ನೂತನ ದಾರಿಯಲ್ಲಿ ಕೆಲಸ ಮಾಡಲಿದೆ. ಉತ್ತಮ ಕಾರ್ಯಕ್ರಮಗಳು ಜನರ ಹಿತ ಕಾಯಲಿದೆ ಎಂದರು.

ರೈತರ ರಕ್ಷಣೆಗಾಗಿ ಸರ್ಕಾರ ಆಧುನಿಕ ನೀತಿ ರೂಪಿಸಲಿದೆ. ಹಿಂದುಳಿದ ವರ್ಗ ಹಾಗೂ ಮಹಿಳೆಯರ ಕಲ್ಯಾಣಕ್ಕೆ ಬದ್ದವಾಗಿದೆ. ಯುವ ಜನತೆಗಾಗಿ ಕೌಶಲ್ಯಾಭಿವೃದ್ದಿ ಯೋಜನೆ ಮತ್ತು ನಿರುದ್ಯೋಗಿಗಳಿಗೆ ಹೆಚ್ಚು ಉದ್ಯೋಗ ಸೃಷ್ಟಿಸಲು ಕಟಿಬದ್ದವಾಗಿದೆ. ರೈತರಲ್ಲಿ ಮನವಿ ಮಾಡುವುದೇನೆಂದರೆ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು, ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸಲು ಪ್ರಯತ್ನಿಸಲಾಗುವುದು. ರೈತರಿಗೆ ಮುಂಗಾರಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ವಿಧಾನಸಭೆಗೆ ಆಗಮಿಸಿದ ಸ್ಪೀಕರ್ ರಮೇಶ್ ಕುಮಾರ ಅವರು ರಾಜ್ಯಪಾಲರನ್ನು ಹೂಗುಚ್ಛ ನೀಡಿ ಸ್ವಾಗತಿ ಸಿದರು. ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಸಚಿವರು ಹಾಗೂ ಸದನ ಸದಸ್ಯರು ಆಗಮಿಸಿದರು. ಜುಲೈ 5ರಂದು ಸಿಎಂ ಕುಮಾರಸ್ವಾಮಿ ಬಜೆಟ್ ಮಂಡಿಸಲಿದ್ದು, ಜಂಟಿ ಅಧಿವೇಶನ ಮಹತ್ವ ಪಡೆದುಕೊಂಡಿದೆ. ರೈತರ ಸಾಲ ಮನ್ನಾ ಕುರಿತಂತೆ ಆಡಳಿತ ಪಕ್ಷದ ವಿರುದ್ಧ ಮುಗಿಬೀಳಲು ಪ್ರತಿಪಕ್ಷ ಬಿಜೆಪಿ ಸಿದ್ದತೆ ಮಾಡಿಕೊಂಡಿದೆ.

ಹೊಸ ಹೊಸ ಆವಿಷ್ಕಾರಗಳ ಮೂಲಕ ಉದ್ಯೋಗ ಸೃಷ್ಟಿಸುವಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರ ಪ್ರಯತ್ನಿಸುತ್ತಿದೆ. ಯುವ ಜನತೆಗೆ ಉತ್ತಮ ಶಿಕ್ಷಣ ನೀಡುವ ಮೂಲಕ 2030ರ ವೇಳೆಗೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಸೈಬರ್ ಅಪರಾಧ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಸೈಬರ್ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆಯನ್ನು ಸರ್ಕಾರ ಮಾಡಲಿದೆ. ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗುವುದು ಎಂದು ರಾಜ್ಯಪಾಲರು ಹೇಳಿದರು.

ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ ಮೂಲಕ ಆಹಾರ ಭದ್ರತೆಗೆ ಒತ್ತು ನೀಡಲಾಗುವುದು. ಕೆರೆ ತುಂಬಿಸುವ ಯೋಜನೆ, ಪ್ರವಾಹ ಪರಿಸ್ಥಿತಿ ಎದುರಿಸಲು ಮುಂಜಾಗ್ರತ ಕ್ರಮ, ಪ್ಲಾಸ್ಟಿಕ್ ನಿಯಂತ್ರಣಕ್ಕೆ ನಿಯಮ ರೂಪಣೆ, ಹಿಂದುಳಿದ ವರ್ಗಗಳ ಉದ್ಯೋಗಕ್ಕಾಗಿ ಕ್ರಮ, ಸಂಚಾರ ದಟ್ಟಣೆ, ಕುಡಿಯುವ ನೀರಿನ ವ್ಯವಸ್ಥೆ, ಬೆಂಗಳೂರು ಮೆಟ್ರೊ ಕಾಮಗಾರಿ ಪೂರ್ಣಗೊಳಿಸಲು ಕ್ರಮ, ಬೆಂಗಳೂರಿನ ಪ್ರಮುಖ ಪ್ರದೇಶಗಳ ರಸ್ತೆ ಅಭಿವೃದ್ಧಿ, ಸರ್ಕಾರಿ ಕೆಲಸಗಳಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ಮೀಸಲಾತಿ, ಜಿಲ್ಲಾ ಮಟ್ಟು ತಾಲ್ಲೂಕು ಮಟ್ಟದಲ್ಲಿ ಆಡಳಿತಕ್ಕ ವಿಡಿಯೊ ಕಾನ್ಫರೆನ್ಸ್ ಇತ್ಯಾದಿ ಸರ್ಕಾರದ ಯೋಜನೆಗಳನ್ನು ಪ್ರಸ್ತಾಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com