
ಕೋಟ(ಉಡುಪಿ): ತಮ್ಮ ವ್ಯಾಪ್ತಿಯಲ್ಲಿ ಬರುವ ಜನರ ರಕ್ಷಣೆ ಮಾಡಬೇಕಾದ ಉಡುಪಿ ಜಿಲ್ಲೆಯ ಕೋಟ ತಾಲ್ಲೂಕಿನ ಪೊಲೀಸರಿಗೆ ಇದೀಗ ತಮ್ಮ ಜೀವವನ್ನೇ ರಕ್ಷಣೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ.
ಅನೇಕ ವರ್ಷಗಳಿಂದ ಕೋಟ ಪೊಲೀಸ್ ಠಾಣೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೋಟ ಪೊಲೀಸ್ ಠಾಣೆಯನ್ನು 1996ರಲ್ಲಿ ಈ ಕಟ್ಟಡಕ್ಕೆ ವರ್ಗಾವಣೆ ಮಾಡಲಾಗಿತ್ತು.
ಈ ಕಟ್ಟಡವು ಬಳಕೆಗೆ ಯೋಗ್ಯವಲ್ಲ ಎಂದು ಕಳೆದ ವರ್ಷ ಘೋಷಿಸಲಾಗಿದ್ದರೂ ಕೂಡ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿನ ಪೊಲೀಸ್ ಠಾಣೆ ಮಾತ್ರವಲ್ಲದೆ ಸಿಬ್ಬಂದಿ ಕ್ವಾರ್ಟರ್ಸ್ ಕೂಡ ಶಿಥಿಲಾವಸ್ಥೆಯಲ್ಲಿದೆ. ಈ ಠಾಣೆಯಲ್ಲಿ ಸುಮಾರು 25 ಸಿಬ್ಬಂದಿ ಕೆಲಸ ಮಾಡುತ್ತಿದ್ದು ಉಡುಪಿ ಉಪ ವಿಭಾಗದ ಬ್ರಹ್ಮಾವರ ಸರ್ಕಲ್ ವ್ಯಾಪ್ತಿಗೆ ಬರುತ್ತದೆ. ಆದರೆ 25 ಸಿಬ್ಬಂದಿಗಳಲ್ಲಿ ಕೇವಲ 6 ಮಂದಿಗೆ ಮಾತ್ರ ವಸತಿ ವ್ಯವಸ್ಥೆ ನೀಡಲಾಗಿದೆ. ಉಳಿದ 19 ಮಂದಿ ಸಿಬ್ಬಂದಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಹಳೆ ಕ್ವಾರ್ಟರ್ಸ್ ಇರುವಾಗ ಎಲ್ಲಾ ಸಿಬ್ಬಂದಿಗೆ ವಸತಿ ವ್ಯವಸ್ಥೆಗಳಿದ್ದವು. ಆದರೆ 5 ವರ್ಷದ ಕೆಳಗೆ ಹಳೆ ಕ್ವಾರ್ಟರ್ಸ್ ವಾಸಕ್ಕೆ ಯೋಗ್ಯವಲ್ಲ ಎಂದು ಘೋಷಿಸಲಾಯಿತು. ಹೀಗಾಗಿ ಸಿಬ್ಬಂದಿಗೆ ವಸತಿ ವ್ಯವಸ್ಥೆ ಇಲ್ಲವಾಗಿದೆ ಎಂದು ಸಿಬ್ಬಂದಿಯೊಬ್ಬರು ಹೇಳುತ್ತಾರೆ.
ಇನ್ನು ಈ ಪೊಲೀಸ್ ಠಾಣೆಯಲ್ಲಿರುವ 170 ಶಸ್ತ್ರಾಸ್ತ್ರಗಳನ್ನು ಗನ್ ಲೈಸೆನ್ಸ್ ಹೊಂದಿರುವವರು ಕಳೆದ ವಿಧಾನಸಭೆ ಚುನಾವಣೆ ವೇಳೆ ತಂದಿಟ್ಟಿದ್ದರು. ಕೆಲವರು ಅದನ್ನು ಇನ್ನೂ ತೆಗೆದುಕೊಂಡು ಹೋಗಿಲ್ಲ. ಅವುಗಳನ್ನು ಸುರಕ್ಷಿತವಾಗಿಡಲು ಸ್ಥಳ ಕೂಡ ನಮ್ಮ ಬಳಿ ಇಲ್ಲ ಎಂದು ಸಿಬ್ಬಂದಿ ಹೇಳುತ್ತಾರೆ.
ಈ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗೆ ಸರಿಯಾದ ಶೌಚಾಲಯ ವ್ಯವಸ್ಥೆಯಿಲ್ಲ. ಪೊಲೀಸ್ ಠಾಣೆಯ ಮೇಲ್ಛಾವಣಿ ದಿನದಿಂದ ದಿನಕ್ಕೆ ಶಿಥಿಲವಾಗುತ್ತಿದೆ. ನೀರು ಸೋರುತ್ತಿದೆ. ಹೀಗಾಗಿ ಮಳೆ ಬಂದರೆ ಕಂಪ್ಯೂಟರ್ ಮತ್ತು ಇನ್ನಿತರ ದಾಖಲೆಗಳು ನೀರು ಬಿದ್ದು ಹಾಳಾಗುವ ಸಾಧ್ಯತೆಯಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎನ್ನುತ್ತಾರೆ ಕೋಟದ ಸಾಮಾಜಿಕ ಕಾರ್ಯಕರ್ತ ಕೋಟ ಗಿರೀಶ್ ಕಾಮತ್.
ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ 2015ರಲ್ಲಿ 75 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಬೇಕಾಗಿತ್ತು. ಅದು 2017ರಲ್ಲಿ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಿಂದ ಮಂಜೂರಾಗಿ ಬಂದಿದೆ. ಕೋಟ ಪೊಲೀಸ್ ಠಾಣೆ ಜೊತೆಗೆ ಬೈಂದೂರಿನ ಸರ್ಕಲ್ ಪೊಲೀಸ್ ಇನ್ಸ್ ಪೆಕ್ಟರ್ ಕಚೇರಿಗೆ ಸಹ ಹೊಸ ಕಟ್ಟಡಕ್ಕೆ ಮಂಜೂರಾಗಿದೆ. ಆದರೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ.
Advertisement