
ಬೆಂಗಳೂರು: ಕಳೆದ ಫೆಬ್ರವರಿ ಮಂಡಿಸಲಾಗಿದ್ದ ಬಜೆಟ್ ನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಡಿಸಿದ್ದ ಆರೋಗ್ಯ ಕರ್ನಾಟಕ ಸಾರ್ವತ್ರಿಕ ಆರೋಗ್ಯ ಯೋಜನೆ ಮಾತ್ರ ನಿನ್ನೆ ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನದ ಆರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಮಾಡಿದ್ದ ಭಾಷಣದಲ್ಲಿ ಪ್ರಮುಖವಾಗಿ ಘೋಷಣೆಯಾದ ಅಂಶವಾಗಿದೆ.
ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರು, 2018ರಲ್ಲಿ ಸಮ್ಮಿಶ್ರ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತರಲಿದೆ. ಸಿದ್ದರಾಮಯ್ಯನವರ ಪ್ರೀತಿಯ ಘೋಷಣೆಯಾಗಿದ್ದ ಇದನ್ನು ಸಮ್ಮಿಶ್ರ ಸರ್ಕಾರ ಜಾರಿಗೆ ತರಲಿದೆ ಎಂದು ಹೇಳಿದರು. ಈ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಿ ದಾಖಲಾತಿ ಮಾಡುವ ಕಾರ್ಯ ಆಗಬೇಕಿದ್ದು ಇದರಡಿ ನಾಗರಿಕರ ಆಸ್ಪತ್ರೆ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರ ಭರಿಸಲಿದೆ.
ಸಮನ್ವಯ ಸಮಿತಿಯಲ್ಲಿ ಸಿದ್ದರಾಮಯ್ಯನವರು ರೈತರ ಸಾಲಮನ್ನಾ ಮಾಡಲು ಎರಡು ಬೇಡಿಕೆಗಳ ಒಪ್ಪಿಗೆಗೆ ಬೇಡಿಕೆಯಿಟ್ಟಿದ್ದರು. ಅದು ಅನ್ನಭಾಗ್ಯ ಯೋಜನೆಗೆ ಸರ್ಕಾರ ಹಣವನ್ನು ಕಡಿತ ಮಾಡದಿರುವುದು ಮತ್ತು ತಮ್ಮ ಇಚ್ಛೆಯ ಆರೋಗ್ಯಸೇವೆ ಯೋಜನೆಯನ್ನು ಜಾರಿಗೆ ತರುವುದು. ರಾಜ್ಯಪಾಲರ ಭಾಷಣದಲ್ಲಿ ಈ ಆರೋಗ್ಯ ಸೇವೆ ಯೋಜನೆ ಜಾರಿಯ ಘೋಷಣೆಯನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿತ್ತು. ರೈತರ ಸಾಲಮನ್ನಾ ಬಗ್ಗೆ ರಾಜ್ಯಪಾಲರು ತಮ್ಮ ಭಾಷಣದಲ್ಲೆಲ್ಲೂ ಪ್ರಸ್ತಾಪ ಮಾಡಿರಲೇ ಇಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವಿ ಮಾಡಿಕೊಂಡಿದ್ದರಷ್ಟೆ ಎನ್ನುತ್ತಾರೆ ಸಿದ್ದರಾಮಯ್ಯನವರ ಆಪ್ತರೊಬ್ಬರು.
ತಮ್ಮ ಭಾಷಣದಲ್ಲಿ ವಜುಭಾಯಿ ವಾಲಾ ಸರ್ಕಾರದ ಗುರಿ ಮತ್ತು ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ್ದರು. ಅವರ ಭಾಷಣವನ್ನು ಸಂಪುಟ ಒಪ್ಪಿಕೊಂಡಿದ್ದು ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆಯನ್ನು ಶ್ಲಾಘಿಸಿ ಇಂದಿನ ಸರ್ಕಾರದ ಉದ್ದೇಶಗಳ ಬಗ್ಗೆ ಪ್ರಸ್ತಾಪಿಸಿದ್ದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪನವರು ರಾಜ್ಯಪಾಲರ ಭಾಷಣವನ್ನು ಸುಳ್ಳುಗಳ ಕಂತೆ ಎಂದು ಆರೋಪಿಸಿದ್ದಾರೆ. ಸರ್ಕಾರ ಮಾಡಿರುವ ಸುಳ್ಳು ಭರವಸೆಗಳನ್ನು ರಾಜ್ಯಪಾಲರ ಭಾಷಣ ಪ್ರತಿಫಲಿಸುತ್ತದೆ ಎಂದು ಹೇಳಿದ್ದಾರೆ. ಸರ್ಕಾರದಲ್ಲಿ ಯಾವುದೇ ವಸ್ತುನಿಷ್ಠ ಯೋಜನೆಗಳಿಲ್ಲ. ಇದು ಸರ್ಕಾರದ ಉಳಿವಿಕೆಯ ಬಗ್ಗೆ ಸಂಶಯ ವ್ಯಕ್ತಪಡಿಸುತ್ತದೆ ಎಂದರು.
Advertisement