ಮಕ್ಕಳ ಹಕ್ಕು ಉಲ್ಲಂಘನೆ: ಬಿಸಿಯೂಟದ ಅಡಿಗೆ ಪಾತ್ರೆ ತೊಳೆಯಲು ವಿದ್ಯಾರ್ಥಿನಿಯರ ಬಳಕೆ

ಊಟದ ಬಳಿಕ ನಿಮ್ಮ ತಟ್ಟೆ-ಲೋತಗಳನ್ನು ನೀವು ತೊಳೆಯುವುದು ಸರಿ ಆದರೆ ಶಾಲೆಗಳ ಮಧ್ಯಾಹ್ನದ ಬಿಸಿಯೂಟದ ಬಳಿಕ ಅಡಿಗೆ ಪಾತ್ರೆಗಳನ್ನು ಸಹ ಮಕ್ಕಳೇ ....
ಮಕ್ಕಳ ಹಕ್ಕು ಉಲ್ಲಂಘನೆ: ಬಿಸಿಯೂಟದ ಅಡಿಗೆ ಪಾತ್ರೆ ತೊಳೆಯಲು ವಿದ್ಯಾರ್ಥಿನಿಯರ ಬಳಕೆ
ಮಕ್ಕಳ ಹಕ್ಕು ಉಲ್ಲಂಘನೆ: ಬಿಸಿಯೂಟದ ಅಡಿಗೆ ಪಾತ್ರೆ ತೊಳೆಯಲು ವಿದ್ಯಾರ್ಥಿನಿಯರ ಬಳಕೆ
ಬೆಂಗಳೂರು: ಊಟದ ಬಳಿಕ ನಿಮ್ಮ ತಟ್ಟೆ-ಲೋತಗಳನ್ನು ನೀವು ತೊಳೆಯುವುದು ಸರಿ ಆದರೆ ಶಾಲೆಗಳ ಮಧ್ಯಾಹ್ನದ ಬಿಸಿಯೂಟದ ಬಳಿಕ ಅಡಿಗೆ ಪಾತ್ರೆಗಳನ್ನು ಸಹ ಮಕ್ಕಳೇ ತೊಳೆಯಬೇಕೆಂದು ಬೆಂಗಳೂರಿನ ಕೆಲ ಶಾಲೆಗಳು ನಿಯಮ ಮಾಡಿವೆ!
ಶುಕ್ರವಾರ ಈ ಕುರಿತ ವೀಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು ಅದರಲ್ಲಿ ಇಬ್ಬರು ಬಾಲಕಿಯರು ಮಧ್ಯಾಹ್ನದ ಊಟಕ್ಖಾಗಿ ಅಡಿಗೆ ಮಾಡಿದ್ದ ದೊಡ್ಡ ಬಾಣಲೆಗಳನ್ನು ತೊಳೆಯುತ್ತಿರುವುದನ್ನು ಕಾಣಬಹುದಾಗಿದೆ. ಇದು ಒಂದು ಶಾಲೆಯ ಕಥೆಯಲ್ಲ ರಾಜ್ಯದ ಹಲವು ಶಾಲೆಗಳಲ್ಲಿ ಈ ಅಲಿಖಿತ ನಿಯಮ ಪಾಲನೆಯಾಗುತ್ತಿದೆ.
ಸಧ್ಯ ಈ ವೀಡಿಯೋ ಮಾಡಿರುವ ವ್ಯಕ್ತಿ ಬಸವನಗುಡಿ ವಿಧಾನಸಭೆಯ  ಎನ್.ಆರ್. ಕಾಲೊನಿಯಲ್ಲಿರುವ ಸರ್ಕಾರಿ ಶಾಲೆಯ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಕಾಲೋನಿಯಲ್ಲಿ ಒಂದೇ ಆವರಣದಲ್ಲಿ ಎರಡು ಶಾಲೆಗಳಿದ್ದು ಒಂದು ಬಿಬಿಎಂಪಿ ಶಾಲೆಯಾಗಿದ್ದರೆ ಇನ್ನೊಂದು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ನಡೆಸುವ ಶಾಲೆಯಾಗಿದೆ.
ಎಕ್ಸ್ ಪ್ರೆಸ್ ಜತೆ ಮಾತನಾಡಿದ ವ್ಯಕ್ತಿ ಹೇಳಿದಂತೆ "ನಾನು ಪ್ರತಿನಿತ್ಯ ಮನೆಗೆ ಊಟಕ್ಕೆ ತೆರಳುವ ವೇಳೆ ಈ ದೃಶ್ಯಗಳನ್ನು ನೊಡುತ್ತಿದ್ದೆ. ಆದರೆ ನಾನು ಕೆಲಸಕ್ಕೆ ತೆರಳಬೇಕಾದ ಕಾರಣ ಈ ಸಂವ್ಬಂಧ ವೀಡಿಯೋ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಣಾನು ರಜೆಯಲ್ಲಿದ್ದು ಶಾಲೆಗಳು ನಡೆಸುವ ಈ ಕೃತ್ಯವನ್ನು ಚಿತ್ರೀಕರಿಸಲು ನಿರ್ಧರಿಸಿದೆ" ಎಂದರು.
ಇನ್ನು ಶಾಲೆಯ ಅಧಿಕಾರಿಗಳು ಸಹ ಮಕ್ಕಳನ್ನು ಅಡಿಗೆ ಪಾತ್ರೆಯನ್ನು ತೊಳೆಯಲು ಬಳಸಿಕೊಳ್ಳುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ವೀಡಿಯೋದಲ್ಲಿನ ಬಾಲಕಿಯರ ಬಗೆಗೆ ಕೇಳಿದಾಗ ಅವರು ಆ ಬಾಲಕಿಯರ ಪೋಷಕರನ್ನು ದೂರಿದ್ದಾರೆ.
ಶಾಲೆಯ ಕಾರ್ಯನಿರ್ವಾಹಕ ಮುಖ್ಯೋಪಾದ್ಯಾಯಿನಿ ಸುಕನ್ಯಾ ಅವರ ಪ್ರಕಾರ "ವೀಡಿಯೋದಲ್ಲಿರುವ ಬಾಲಕಿಯರ ತಾಯಿ ನಮ್ಮ ಶಾಲೆಯ ಅಡಿಗೆ ಪಾತ್ರೆಗಳನ್ನು ತೊಳೆಯಲು ಆಗಮಿಸುತ್ತಾಳೆ. ಆಕೆ ಮಧ್ಯಾಹ್ನ ಊಟವಾದ ಬಳಿಕ ತನ್ನ ಮಗಳನ್ನು ಸಹಾಯಕ್ಕಾಗಿ ಕರೆಯುತ್ತಾಳೆ. ಅದೇ ವೇಳೆ ವಿದ್ಯಾರ್ಥಿನಿಯ ಸ್ನೇಹಿತೆ ಸಹ ಅವಳ ಸಹಾಯಕ್ಕೆ ಆಗಮಿಸಿದ್ದಾಳೆ. ಈ ಕುರಿತಂತೆ ನಾವು ಮಹಿಳೆಗೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ನಾವಿನ್ನು ಮೇಲಾಧಿಕಾರಿಗಳಿಗೆ ಈ ಸಂಬಂಧ ದೂರು ಸಲ್ಲಿಸಲು ತೀರ್ಮಾನಿಸಿದ್ದೇವೆ."
ಏತನ್ಮಧ್ಯೆ ಮಕ್ಕಳ ಹಕ್ಕುಗಳ ಹೋರಾಟಗಾರರಾದ ನಾಗಸಿಂಹ ಜಿ ರಾವ್ ಮಾತನಾಡಿ "ಈ ಅಭ್ಯಾಸವು ರಾಜ್ಯದಲ್ಲಿನ ಹಲವಾರು ಶಾಲೆಗಳಲ್ಲಿದೆ ಎಂದಿದ್ದಾರೆ. "ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಪಾತ್ರೆ ತೊಳೆಯುವುದಷ್ಟೇ ಅಲ್ಲ ಮಕ್ಕಳಿಂದ ಶೌಚಾಲಯಗಳನ್ನು ಸಹ ಶುಚಿಗೊಳಿಸಲಾಗುತ್ತದೆ. ಅವರೇನಾದರೂ ತಪ್ಪು ಮಾಡಿದ್ದರೆ ಅಂತಹಾ ಮಕ್ಕಳಿಗೆ ಶಿಕ್ಷೆ ರೂಪದಲ್ಲಿ ಇಂತಹಾ ಕೆಲಸಗಳ ನೀಡುವ ಶಾಲೆಗಳಿದೆ. ಆದರೆ ಕಾನೂನಿನಡಿ ಇದು ಅಪರಾಧ ಎಂದು ಪರಿಗಣಿಸಲ್ಪಡುತ್ತದೆ" ಅವರು ವಿವರಿಸಿದರು.
"ಈ ನಿರ್ದಿಷ್ಟ ಪ್ರಕರಣದಲ್ಲಿ ನಾವು ಮಕ್ಕಳೊಡನೆ ಮಾತನಾಡಿದ ಬಳಿಕ ಇದು ಸ್ವಯಂಪ್ರೇರಿತವೋ ಅಥವಾ ಶಾಲೆಯವರೇ ವಿಧಿಸಿದ ನಿಯಮವೋ ಎನ್ನುವುದು ತಿಳಿಯಲಿದೆ.ಬ್ಲಾಕ್ ನ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಈ ಸಂಬಂಧ ವಿಚಾರಣೆ ನಡೆಸಲಿದ್ದಾರೆ" ಅವರು ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com