ಪ್ರೀತಿಗೆ ವಿರೋಧ: ಬೀರೂರಿನಲ್ಲಿ ವಿದ್ಯಾರ್ಥಿನಿ ಸಂಬಂಧಿಕರಿಂದ ವಿದ್ಯಾರ್ಥಿ ಹತ್ಯೆ

ಸಹಪಾಠಿಯನ್ನು ಪ್ರೀತಿಸುತ್ತಿದ್ದ ಕಾಲೇಜು ವಿದ್ಯಾರ್ಥಿಯನ್ನು ವಿದ್ಯಾರ್ಥಿನಿಯ ಸಂಬಂಧಿಕರು ಹತ್ಯೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು: ಸಹಪಾಠಿಯನ್ನು ಪ್ರೀತಿಸುತ್ತಿದ್ದ ಕಾಲೇಜು ವಿದ್ಯಾರ್ಥಿಯನ್ನು ವಿದ್ಯಾರ್ಥಿನಿಯ ಸಂಬಂಧಿಕರು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬೀರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ.

ಕೊಲೆಯಾದ ಬಾಲಕ ಎಸ್ ವೈ ರೋಹನ್ ಶವ ಲಿಂಗದಹಳ್ಳಿ-ಸಂತ್ವೇರಿ ರಸ್ತೆಯ ಸೇತುವೆ ಕೆಳಗೆ ಸಿಕ್ಕಿದೆ ಎಂದು ಕಡೂರು ಪೊಲೀಸರು ತಿಳಿಸಿದ್ದಾರೆ. ಈತ ಬೀರೂರಿನ ಕಾತ್ಯಾಯಿನಿ ಮತ್ತು ದಿವಂಗತ ಯೋಗೇಶ್ವರ್ ಅವರ ಪುತ್ರನಾಗಿದ್ದು ಕಡೂರಿನ ವೀರಪ್ರದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.

ಎರಡು ತಿಂಗಳ ಹಿಂದೆ ಇವನ ತಂದೆ ಹೃದಯಾಘಾತದಿಂದ ನಿಧನರಾಗಿದ್ದರು. ರೋಹನ್ ನನ್ನು ಪ್ರೀತಿಸುವುದಕ್ಕೆ ಐಶ್ವರ್ಯಾ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಕಳೆದ ಮಂಗಳವಾರ ಅಪರಾಹ್ನ ಆಕೆಯ ಸಂಬಂಧಿಗಳಾದ ಜೀವನ್ ಮತ್ತು ಅಶ್ವಿನ್ ರೋಹನ್ ಕಾಲೇಜು ಮುಗಿಸಿಕೊಂಡು ಹೊರಬರುವುದನ್ನು ಕಾಯುತ್ತಿದ್ದರು. ಬೀರೂರಿಗೆ ಹೋಗಲು ರೋಹನ್ ಬಸ್ಸಿಗೆ ಹತ್ತಲು ನೋಡಿದಾಗ ತಮ್ಮ ಕಾರಿಗೆ ಹತ್ತುವಂತೆ ಸೂಚಿಸಿದರು.

ರೋಹನ್ ನ ಸಹಪಾಠಿ ಅರುಣ್ (ಹೆಸರು ಬದಲಿಸಲಾಗಿದೆ) ಅವರನ್ನು ಬೈಕ್ ನಲ್ಲಿ ಹಿಂಬಾಲಿಸಿದ. ಬೀರೂರಿನಿಂದ ಎಮ್ಮೆದೊಡ್ಡಿಗೆ ಹೋಗುವಲ್ಲಿ ಜೀವನ್ ಮತ್ತು ಅಶ್ವಿನ್ ರೋಹನ್ ಬಳಿ ಐಶ್ವರ್ಯಾಳನ್ನು ಪ್ರೀತಿಸುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ನಂತರ ಭಾರೀ ಚರ್ಚೆ ನಡೆದಿದೆ. ಸಿಟ್ಟಿನಿಂದ ಜೀವನ್ ಮತ್ತು ಅಶ್ವಿನ್ ಶಾಲಿನಿಂದ ರೋಹನ್ ನ ಕುತ್ತಿಗೆಯನ್ನು ಬಿಗಿದು ಸಾಯಿಸಿ ಬ್ಯಾಗಿನಲ್ಲಿ ಶವವನ್ನು ತುಂಬಿಸಿ ಸಂತವೇರಿ ಸಮೀಪ ಸೇತುವೆಯ ಕೆಳಗೆ ಎಸೆದು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಅದೇ ದಿನ ಸಾಯಂಕಾಲ ರೋಹನ್ ನ ತಾಯಿ ಕಾತ್ಯಾಯಿನಿಗೆ ನಿಮ್ಮ ಮಗನನ್ನು ಅಪಹರಿಸಿದ್ದೇವೆ 15 ಲಕ್ಷ ರೂಪಾಯಿ ಕೊಡಿ ಎಂದು ಅನಾಮಧೇಯ ಕರೆ ಬಂದಿದೆ. ಇಂತಹ ಸ್ಥಳಕ್ಕೆ ತಂದುಕೊಡಿ ಎಂದು ಕೂಡ ಆರೋಪಿಗಳು ಹೇಳಿದ್ದಾರೆ. ನಂತರ ಸ್ವಲ್ಪ ಹೊತ್ತು ಕಳೆದು ಇನ್ನೊಂದು ಸ್ಥಳ ಹೇಳಿದ್ದಾರೆ. ಗಾಬರಿಗೊಂಡ ಕಾತ್ಯಾಯಿನಿ ಬೀರೂರು ಪೊಲೀಸರಿಗೆ ತನ್ನ ಮಗ ಕಾಣೆಯಾಗಿದ್ದಾನೆ ಎಂದು ದೂರು ನೀಡಿದರು.

ಕೂಡಲೇ ಕಾರ್ಯಪ್ರವೃತ್ತರಾದ ಬೀರೂರು ಪೊಲೀಸರು ರೋಹನ್ ನ ಶವ ಪತ್ತೆ ಹಚ್ಚಿದ್ದಾರೆ.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ ಪಿ ನಾಗರಾಜ್ ಅವರ ಪುತ್ರನಾಗಿರುವ ಜೀವನ್ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಇನ್ನು ಪಿಯುಸಿ ಮುಗಿಸಿರುವ ಅಶ್ವಿನ್ ಇಬ್ಬರೂ ಬಂಧಿತರಾಗಿದ್ದಾರೆ. ಅರುಣ್ ನನ್ನು ಕೂಡ ವಶಕ್ಕೆ ಪಡೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com