
ಬೆಂಗಳೂರು: ಹವಾನಿಯಂತ್ರಿತ ಬಸ್ಸುಗಳಲ್ಲಿ ಇನ್ನು ಮುಂದೆ ನಿಮ್ಮ ಮುದ್ದಿನ ಸಾಕುಪ್ರಾಣಿಯನ್ನು ಜೊತೆಯಲ್ಲಿ ಕೊಂಡೊಯ್ಯುವಂತಿಲ್ಲ, ಪ್ರೀಮಿಯಂ ಸರ್ವಿಸ್ ಬಸ್ಸುಗಳಲ್ಲಿ ಸಾಕುನಾಯಿಗಳನ್ನು ಕರೆದೊಯ್ಯುವ ಸೌಲಭ್ಯವನ್ನು ತೆಗೆದುಹಾಕಲು ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ಧರಿಸಿದೆ.
ಪ್ರತಿ ಐದು ವರ್ಷಗಳಿಗೊಮ್ಮೆ ಕೆಎಸ್ಆರ್ ಟಿಸಿ ದರ ಪರಿಷ್ಕರಣೆ ಮಾಡುತ್ತಿದ್ದು, ಸಾಕುನಾಯಿ, ಬೆಕ್ಕು, ಮೊಲ ಮತ್ತು ಗಿಳಿಗಳಿಗೆ ಸಹ ಈ ವರ್ಷ ಫೆಬ್ರವರಿಯಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು. ಸಾಕುನಾಯಿಗಳನ್ನು ತಮ್ಮ ಜೊತೆ ಬಸ್ಸುಗಳಲ್ಲಿ ಕರೆದೊಯ್ಯುತ್ತಿದ್ದರೆ ಒಬ್ಬ ವಯಸ್ಕ ವ್ಯಕ್ತಿಯ ಪ್ರಯಾಣ ದರಕ್ಕೆ ಸಮನಾದ ದರ ನೀಡಬೇಕಾಗುತ್ತದೆ.
ಇತ್ತೀಚೆಗೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಬಸ್ ಕಂಡಕ್ಟರ್ ಒಬ್ಬರು ಪ್ರಯಾಣಿಕರೊಬ್ಬರಿಂದ ಎರಡು ಹುಂಜಗಳನ್ನು ಕೊಂಡೊಯ್ಯುತ್ತಿದ್ದುದಕ್ಕೆ ಅರ್ಧ ಟಿಕೆಟ್ ನೀಡಿದ್ದು ಸುದ್ದಿಯಾಗಿತ್ತು. ಇದೀಗ ಕೆಎಸ್ಆರ್ ಟಿಸಿ ಹವಾನಿಯಂತ್ರಿತ ಬಸ್ಸುಗಳಲ್ಲಿ ಸಾಕುಪ್ರಾಣಿಗಳನ್ನು ಕೊಂಡೊಯ್ಯುವುದಕ್ಕೆ ನಿಷೇಧ ಹೇರಲಿದೆ.
ಇದಕ್ಕೆ ಮುಖ್ಯ ಕಾರಣ ಪ್ರಯಾಣಿಕರಿಂದ ಬರುತ್ತಿರುವ ದೂರುಗಳು ಮತ್ತು ಬಸ್ ಸಿಬ್ಬಂದಿಯ ಅಭಿಪ್ರಾಯಗಳು ಎನ್ನುತ್ತಾರೆ ಕೆಎಸ್ಆರ್ ಟಿಸಿ ಅಧಿಕಾರಿಗಳು. ಹವಾನಿಯಂತ್ರಿತ ಬಸ್ಸುಗಳಲ್ಲಿ ಕಿಟಕಿ ಬಾಗಿಲುಗಳನ್ನು ತೆರೆಯದಿರುವುದರಿಂದ ಹೊರಗಿನ ಗಾಳಿಯಿಲ್ಲದಿರುವುದರಿಂದ ಸಾಕುಪ್ರಾಣಿಗಳ ಉಸಿರಾಟ ಬಸ್ಸಿನೊಳಗೆ ಸುತ್ತುತ್ತಿರುತ್ತದೆ. ಇದರಿಂದ ಪ್ರಯಾಣಿಕರಿಗೆ ವಾಸನೆ ಬರುತ್ತದೆ, ಹೀಗಾಗಿ ಪ್ರಯಾಣಿಕರು ದೂರುತ್ತಾರೆ, ಬಸ್ಸಿನಲ್ಲಿ ಸಾಕುಪ್ರಾಣಿಗಳನ್ನು ಕರೆದೊಯ್ದರೆ ಇತರ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸಹ ತೊಂದರೆಯಾಗುತ್ತದೆ ಎಂದರು ಕೆಎಸ್ಆರ್ ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್.
ಈ ಬಗ್ಗೆ ಕೆಎಸ್ ಆರ್ ಟಿಸಿಯ ಎಲ್ಲಾ 15 ವಿಭಾಗಗಳಲ್ಲಿ ಸದ್ಯದಲ್ಲಿಯೇ ಸುತ್ತೋಲೆ ಹೊರಡಿಸಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಇದಕ್ಕೆ ಪ್ರಾಣಿದಯಾ ಕಾರ್ಯಕರ್ತರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲವಿದೆ.
Advertisement