ಪಟ್ಟದ ದೇವರ ಹಿಂದಿರುಗಿಸದಿದ್ದರೆ ಕ್ರಿಮಿನಲ್ ಕೇಸ್: ಶಿರೂರು ಶ್ರೀಗಳ ಎಚ್ಚರಿಕೆ

ಉಡುಪಿ ಅಷ್ಟಮಠದ ಯತಿಗಳು ಶಿರೂರು ಮಠದ ಪಟ್ಟದ ದೇವರಾದ ಅನ್ನ ವಿಠ್ಠಲನ ವಿಗ್ರಹವನ್ನು ನನಗೆ ಹಿಂತಿರುಗಿಸದೆ ಹೋದಲ್ಲಿ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡುತ್ತೇನೆ
ಶ್ರೀ ಲಕ್ಷ್ಮೀವರತೀರ್ಥ ಶ್ರೀಗಳು
ಶ್ರೀ ಲಕ್ಷ್ಮೀವರತೀರ್ಥ ಶ್ರೀಗಳು
ಉಡುಪಿ: ಉಡುಪಿ ಅಷ್ಟಮಠದ ಯತಿಗಳು ಶಿರೂರು ಮಠದ ಪಟ್ಟದ ದೇವರಾದ ಅನ್ನ ವಿಠ್ಠಲನ ವಿಗ್ರಹವನ್ನು ನನಗೆ ಹಿಂತಿರುಗಿಸದೆ ಹೋದಲ್ಲಿ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡುತ್ತೇನೆ ಎಂದು ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.
ಶಿರೂರು ಮೂಲ ಮಠದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಸ್ವಾಮೀಜಿ "ಅನ್ನ ವಿಠ್ಠಲ ನನ್ನ ದೇವರು. ಅವನು ನನ್ನ ಸ್ವತ್ತು. ಕೃಷ್ಣ ಮಠದ ಕೃಷ್ಣನಾಗಲಿ, ಪಲಿಮಾರು ಮಠದ ರಾಮನಾಗಲಿ ನನ್ನ ಸ್ವತ್ತಲ್ಲ ಹೀಗಾಗಿ ನನ್ನ ಸ್ವಂತದ್ದಾದ ವಿಠ್ಠಲನನ್ನು ನಾನು ಹೇಗೆ ಪಡೆಯಬೇಕೆಂದು ನನಗೆ ತಿಳಿದಿದೆ. ಎಂದಿದ್ದಾರೆ.
"ನಂಬಿಕೆಯಿಂದ ನೀಡಿದ್ದ ವಸ್ತುವೊಂದನ್ನು ಹಿಂತಿರುಗಿಸದೆ ತಮ್ಮಲ್ಲೇ ಇತ್ಟುಕೊಳ್ಳುವುದು ಕಳ್ಳತನ, ದರೋಡೆಗೆ ಸಮ. ನನ್ನ ದೇವರನ್ನು ನನಗೆ ಹಿಂತಿರುಗಿಸದೆ ಮಠಾಧೀಶರು ನನಗೆ ಅನ್ಯಾಯವೆಸಗುತ್ತಿದ್ದಾರೆ." ಶ್ರೀಗಳು ಆರೋಪಿಸಿದರು.
ಶಿಷ್ಯ ಸ್ವೀಕಾರದ ಕುರಿತಂತೆ ಮಾತನಾಡಿದ ಶ್ರೀಗಳು "ನನ್ನ ಮಠದ ಶಿಷ್ಯ ಸ್ವೀಕಾರ ಯಾವಾಗ ನಡೆಯಬೇಕು ಎನ್ನುವುದನ್ನು ನಿರ್ಧರಿಸಲು ಅವರು (ಅಷ್ಠಮಠದ ಯತಿಗಳು) ಯಾರು? ಈ ಕುರಿತಂತೆ ಮಠದಲ್ಲಿ ನಡೆಯುವ ಯಾವ ಸಭೆಗೆ ನಾನು ಹಾಜರಾಗುವುದಿಲ್ಲ. ನನ್ನ ನಿರ್ಧಾರ ಗಟ್ಟಿಯಾಗಿದೆ" ಎಂದರು.
ಈ ಮೂಲಕ ಕಳೆದ ಕೆಲವು ದಿನಗಳಿಂದ ಶಿರುರು ಶ್ರೀಗಳು ಹಾಗೂ ಉಳಿದ ಸ್ವಾಮೀಜಿಗಳ ನಡುವಿನ ಜಟಾಪಟಿ ಇನ್ನಷ್ಟು ಜಟಿಲವಾಗುತ್ತಿದೆ ಎಂದು ಹೊರನೋಟಕ್ಕೇ ಸ್ಪಷ್ಟವಾಗಿದೆ. ಕೆಲ ದಿನಗಳ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಬೇಕಾದಾಗ ಶಿರೂರು ಶ್ರೀಗಳು ಪಟ್ಟದ ದೇವರನ್ನು ಕೃಷ್ಣಮಠದಲ್ಲಿ ಇರಿಸಿ ಹೋಗಿದ್ದರು. ಆದರೆ ಇದೀಗ ತಾವು ಆರೋಗ್ಯವಾಗಿ ಹಿಂತಿರುಗಿದ ಬಳಿಕ ಮತ್ತೆ ಪಟ್ಟದ ದೇವರನ್ನು ಕೇಳುತ್ತಿದ್ದಾರೆ. 
ಶಿರೂರು ಶ್ರೀಗಳು ಅಷ್ಠ ಮಠದ ನಿಯಮಾವಳಿಗೆ ವಿರುದ್ಧವಿದ್ದಾರೆ, ಅವರು ಶಿಷ್ಯ ಸ್ವೀಕಾರ ಮಾಡದ ಹೊರತು ಪಟ್ಟದ ದೇವರ ಹಿಂದಿರುಗಿಸುವುದಿಲ್ಲ ಎಂದು ಮಠಾಧೀಶರು ಪಟ್ಟು ಹಿಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com