ಮಡಿಕೇರಿ: ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಜುಲೈ 19 ಮತ್ತು 20 ರಂದು ಕೊಡಗು ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಹಾರಂಗಿ ಜಲಾಶಯ ಭಾಗಮಂಡಲ ಹಾಗೂ ತಲಕಾವೇರಿಗಳಿಗೆ ಸಿಎಂ ಭೇಟಿ ನೀಡಲಿದ್ದಾರೆ.
ಈ ವೇಳೆ ಸಿಎಂ ಸಂಚರಿಸುವ ಮಾರ್ಗದಲ್ಲಿ ಬೀಳುವ ಅಪಾಯ ಇರುವ ಮರಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ, ಅರಣ್ಯ ಇಲಾಖೆ ಅಧಿಕಾರಿಗಳು ಬೀಳುವ ಅಪಾಯದಲ್ಲಿರುವ ಮರಗಳ ಜೊತೆ ಚೆನ್ನಾಗಿರುವ ಮರಗಳಿಗೂ ಕೊಡಲಿ ಹಾಕಿದ್ದಾರೆ. 3ರಿಂದ 4 ಸಣ್ಣ ಮರಗಳು ಹಾಗೂ ಸುಮಾರು 10 ಮರಗಳಿಗೆ ಕೊಡಲಿ ಹಾಕಲಾಗಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ,
ಮರ ಕತ್ತರಿಸುವಂತೆ ಜಿಲ್ಲಾಧಿಕಾರಿ ಮಾಡಿರುವ ಆದೇಶವನ್ನು ಡಿಸಿ ಕಚೇರಿ ನಿರಾಕರಿಸಿದೆ, ತಾವು ಯಾವುದೇ ಆದೇಶ ಮಾಡಿಲ್ಲ ಎಂದು ಹೇಳಿದೆ, ಆದರೆ ಡಿಸಿ ಹೊರಡಿಸಿರುವ ಆದೇಶದ ಪ್ರತಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಬಳಿ ಇದೆ.
ಭಾಗಮಂಡಲ ಮತ್ತು ತಲಾ ಕಾವೇರಿ ರಸ್ತೆ ಮಾರ್ಗ ಮಧ್ಯದಲ್ಲಿ ಹಲವು ಮರಗಳನ್ನು ಕತ್ತರಿಸಿರುವುದನ್ನು ನೋಡಿರುವುದಾಗಿ ಕೊಡಗು ಏಕೀಕರಣ ಸಮಮಿತಿ ಸದಸ್ಯ ತಮ್ಮ ಪೂವಯ್ಯ ತಿಳಿಸಿದ್ದಾರೆ.