
ಬೆಂಗಳೂರು: ಬೋಧಕ ಸಿಬ್ಬಂದಿಯನ್ನು ಮಂಡ್ಯ ಜಿಲ್ಲೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ರಿಜಿಸ್ಟ್ರಾರ್ ಆಗಿ ವರ್ಗಾಯಿಸಬೇಕೆಂದು ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡರ ಶಿಫಾರಸು ಸರ್ಕಾರಿ ಅಧಿಕಾರಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸಿಬ್ಬಂದಿ ಪ್ರಸ್ತುತ ಸಣ್ಣ ನೀರಾವರಿ ಖಾತೆ ಸಚಿವರ ಆಪ್ತ ಸಹಾಯಕರಾಗಿದ್ದಾರೆ.
ಸಚಿವರ ಶಿಫಾರಸಿಗೆ ತಾಂತ್ರಿಕ ಶಿಕ್ಷಣ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅಧಿಕಾರಿಯೊಬ್ಬರು, ಕರ್ನಾಟಕ ಶಿಕ್ಷಣ ಇಲಾಖೆ ನೇಮಕಾತಿ ನಿಯಮ 2006ರ ಪ್ರಕಾರ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಿಜಿಸ್ಟ್ರಾರ್ ಹುದ್ದೆ ಬಡ್ತಿಯ ಮೂಲಕ ಮಾತ್ರವೇ ತುಂಬಲು ಸಾಧ್ಯ. ರಿಜಿಸ್ಟ್ರಾರ್ ಆಗಿ ಬಡ್ತಿ ಹೊಂದಲು ಇಲಾಖೆಯಲ್ಲಿ ಮೇಲ್ವಿಚಾರಕರಾಗಿ ಮೂರು ವರ್ಷ ಕೆಲಸ ಮಾಡಿರಬೇಕು ಎನ್ನುತ್ತಾರೆ.
ಈ ವಿಷಯದಲ್ಲಿ ನಿಯಮ ಉಲ್ಲಂಘಿಸಿದರೆ ನಾವು ಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದರು.
ಸಚಿವ ಜಿ ಟಿ ದೇವೇಗೌಡ ಅವರು ಮಾಡಿರುವ ಶಿಫಾರಸು ಪತ್ರದ ಪ್ರತಿ ಮತ್ತು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮಾಡಿರುವ ಶಿಫಾರಸಿನ ಪ್ರತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಬಳಿ ಲಭ್ಯವಿದೆ. ಶಿಫಾರಸಿನಲ್ಲಿ ಸಚಿವರು, '' ರಿಜಿಸ್ಟ್ರಾರ್ ಹುದ್ದೆ ಶಿಕ್ಷಕ ಹುದ್ದೆಗೆ ಸಮನಾಗಿರುವುದರಿಂದ ಕೇಡರ್ ನ್ನು ಬದಲಾಯಿಸಬಹುದು, ಈ ಮೂಲಕ ಪ್ರಸ್ತುತ ನೀರಾವರಿ ಇಲಾಖೆಯಲ್ಲಿ ಸಚಿವರಿಗೆ ಆಪ್ತ ಕಾರ್ಯದರ್ಶಿಯಾಗಿರುವ ಎಕೆ ರವಿ ಅವರನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಶ್ರೀರಂಗಪಟ್ಟಣದ ಅರಕೆರೆಗೆ ವರ್ಗಾಯಿಸಬಹುದು'' ಎಂದು ಬರೆದಿದ್ದಾರೆ.
ಲಭ್ಯವಿರುವ ಮಾಹಿತಿ ಪ್ರಕಾರ, ರಾಜ್ಯ ಸರ್ಕಾರಿ ಕಾಲೇಜುಗಳಲ್ಲಿ 70 ರಿಜಿಸ್ಟ್ರಾರ್ ಹುದ್ದೆ ಖಾಲಿಯಿದೆ. ಹಲವು ವರ್ಷಗಳಿಂದ ಬೋಧಕೇತರ ಸಿಬ್ಬಂದಿ ಹುದ್ದೆ ಕೂಡ ರಿಜಿಸ್ಟ್ರಾರ್ ಆಗಿ ಬಡ್ತಿ ಹೊಂದದೆ ಖಾಲಿ ಉಳಿದುಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಲು ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಸಂಪರ್ಕಕ್ಕೆ ಸಿಗಲಿಲ್ಲ.
Advertisement