ಗೌರಿ ಲಂಕೇಶ ಹತ್ಯೆ ತನಿಖೆ: ಡೈರಿ ಜಪ್ತಿ, ಮೊದಲ ಟಾರ್ಗೆಟ್ ಗಿರೀಶ್ ಕಾರ್ನಾಡ್!

ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆಯಿಂದ ...
ಗಿರೀಶ್ ಕಾರ್ನಾಡ್
ಗಿರೀಶ್ ಕಾರ್ನಾಡ್
ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆಯಿಂದ ವಶಪಡಿಸಿಕೊಳ್ಳಲಾಗಿರುವ ಡೈರಿಯಲ್ಲಿ ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಮೊದಲ ಟಾರ್ಗೆಟ್ ಆಗಿದ್ದರು ಎಂಬ ಆಘಾತಕಾರಿ ಅಂಶ ಪತ್ತೆಯಾಗಿದೆ.
ವಿಚಾರವಾದಿಗಳ ಹತ್ಯೆಗೆ ದೊಡ್ಡ ಪಟ್ಟಿಯನ್ನೇ ಮಾಡಿಕೊಂಡಿದ್ದ ಹಂತಕರು ಗಿರೀಶ್ ಕಾರ್ನಾಡ್ ರನ್ನು ಮೊದಲು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಎರಡನೇ ಸ್ಥಾನದಲ್ಲಿದ್ದ ಗೌರಿ ಲಂಕೇಶ್ ಅವರು ಹಂತಕರ ಗುಂಡಿಗೆ ಬಲಿಯಾದರು ಎಂದು ಎಸ್ ಐಟಿ ತನಿಖೆ ವೇಳೆ ಬಹಿರಂಗವಾಗಿದೆ.
ಪುಣೆ ನಿವಾಸಿ ಹಾಗೂ ಹಿಂದೂ ಜಾಗರಣ ವೇದಿಕೆ ನಾಯಕ ಅಮೋಲ್ ಕಾಳೆ ಬಳಿಯಿದ್ದ ಡೈರಿಯಿಂದ ಈ ವಿಚಾರ ಬಹಿರಂಗವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಡೈರಿಯಲ್ಲಿ ವಿಚಾರವಾದಿಗಳ ಹೆಸರನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದ್ದು, ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್, ಸಾಹಿತಿ ಹಾಗೂ ರಾಜಕಾರಣಿ ಬಿಟಿ ಲಲಿತಾ ನಾಯಕ್, ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಪ್ರಗತಿಪರ ಚಿಂತಕ ಸಿಎಸ್ ದ್ವಾರಕನಾಥ್ ಅವರು ಹಿಟ್ ಲಿಸ್ಟ್ ನಲ್ಲಿದ್ದರು ಎಂದು ಎಸ್ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿಗಳಿಂದ ಎಸ್ ಐಟಿ ಅಧಿಕಾರಿಗಳು ಡೈರಿಯೊಂದು ವಶಪಡಿಸಿಕೊಂಡಿದ್ದು, ಅದರಲ್ಲಿ ಈ ಸಾಹಿತಿಗಳ ಮತ್ತು ಪ್ರಗತಿಪರರ ಹೆಸರು ಬರೆಯಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಡೈರಿಯಲ್ಲಿ ಕೆಲವು ಕೋಡ್ ವರ್ಡ್ ಗಳನ್ನು ಬಳಸಲಾಗಿದ್ದು, ಅವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com