ಭಿಕ್ಷುಕರ ಪುನರ್ವಸತಿಗೆ ಬಿಬಿಎಂಪಿಯಿಂದ ರೂ.130 ಕೋಟಿ ಬಾಕಿ!

ಪೌರಕಾರ್ಮಿಕರಿಗೆ ಮತ್ತು ಗುತ್ತಿಗೆದಾರರಿಗೆ ವೇತನ ನೀಡಿಕೆಯಲ್ಲಿ ವಿಳಂಬ ಮಾಡಿ ಟೀಕೆಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪೌರಕಾರ್ಮಿಕರಿಗೆ ಮತ್ತು ಗುತ್ತಿಗೆದಾರರಿಗೆ ವೇತನ ನೀಡಿಕೆಯಲ್ಲಿ ವಿಳಂಬ ಮಾಡಿ ಟೀಕೆಗೆ ಗುರಿಯಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಭಿಕ್ಷುಕರ ಪುನರ್ವಸತಿಗೆಂದು ಸಾರ್ವಜನಿಕರಿಂದ ಸಂಗ್ರಹಿಸಿರುವ ಕೋಟಿಗಟ್ಟಲೆ ತೆರಿಗೆ ಹಣವನ್ನು  ವಿನಿಯೋಗಿಸಿಲ್ಲ  ಎಂದು ತಿಳಿದುಬಂದಿದೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಪಾಲಿಕೆ ಆಯುಕ್ತರಿಗೆ ಕಳೆದ ಮೇ 22ರಂದು ಬರೆದ ಪತ್ರದಲ್ಲಿ, 2008ರಿಂದ ಇಲ್ಲಿಯವರೆಗೆ ಸಮಾಜ ಕಲ್ಯಾಣ ಇಲಾಖೆಯಡಿ ಕೇಂದ್ರ ಪರಿಹಾರ ಸಮಿತಿಗೆ ಬಿಬಿಎಂಪಿ 130 ಕೋಟಿ ರೂಪಾಯಿ ತೆರಿಗೆ ಮೊತ್ತ ಪಾವತಿಸಬೇಕಿದೆ. ಕರ್ನಾಟಕ ಭಿಕ್ಷುಕರ ಪುನರ್ವಸತಿ ಕಾಯ್ದೆ 1975ರಡಿ, ವರ್ಷಕ್ಕೆ ಶೇಕಡಾ 3ರಷ್ಟು ವಾರ್ಷಿಕ ಆಸ್ತಿ ತೆರಿಗೆಯನ್ನು ಭಿಕ್ಷುಕರ ಪುನರ್ವಸತಿ ತೆರಿಗೆಯೆಂದು ಸಂಗ್ರಹಿಸಲಾಗುತ್ತದೆ.

ರಸ್ತೆಬದಿಯಲ್ಲಿರುವ ಭಿಕ್ಷುಕರನ್ನು ಕರೆದುಕೊಂಡು ಪುನರ್ವಸತಿ ಕೇಂದ್ರಗಳಲ್ಲಿ ಇರಿಸಲಾಗುತ್ತದೆ. ಅಲ್ಲಿ ಅವರಿಗೆ ತೋಟಗಾರಿಕೆ, ಕಸೂತಿ, ಹೊಲಿಗೆ, ಬಕೆಟ್ ತಯಾರಿಸುವುದು ಇನ್ನಿತರ ತರಬೇತಿ ನೀಡಲಾಗುತ್ತದೆ. ಅಲ್ಲಿ ಅವರಿಗೆ ಉದ್ಯೋಗ ನೀಡಿ ತಿಂಗಳಿಗೆ 4 ಸಾವಿರದಿಂದ 5 ಸಾವಿರದವರೆಗೆ ವೇತನ ನೀಡಲಾಗುತ್ತದೆ. ಕರ್ನಾಟಕದಲ್ಲಿ ಪ್ರಸ್ತುತ 14 ಪುನರ್ವಸತಿ ಕೇಂದ್ರಗಳಿದ್ದು ಬೆಂಗಳೂರಿನಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಸುಮಾರು 700 ಭಿಕ್ಷುಕರಿದ್ದಾರೆ. ಬಿಬಿಎಂಪಿ ಬಾಕಿ ಉಳಿಸಿಕೊಂಡಿರುವ ತೆರಿಗೆ ಹಣದ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಕೇಂದ್ರ ಪರಿಹಾರ ಸಮಿತಿಯ ಕಾರ್ಯದರ್ಶಿ ಚಂದ್ರ ನಾಯ್ಕ್, ನಮ್ಮ ಹಣಕ್ಕೆ ನಾವು ಹೋರಾಟ ಮಾಡಿ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ದೀರ್ಘಕಾಲದ ಬೇಡಿಕೆ ನಂತರ ಬಿಬಿಎಂಪಿ ಒಟ್ಟು ಮೊತ್ತದ ಕೆಲ ಭಾಗವನ್ನು ಬಿಡುಗಡೆ ಮಾಡಿದೆ. 2008ರಿಂದ ತೆರಿಗೆ ಹಣ ನೀಡಿಕೆಯಲ್ಲಿ ವಿಳಂಬವಾಗುತ್ತಿದೆ. ಇದೀಗ 130.31 ಕೋಟಿ ರೂಪಾಯಿ ಹಣ ನಮಗೆ ಬಿಬಿಎಂಪಿಯಿಂದ ಬರಬೇಕಿದೆ. ಪುನರ್ವಸತಿ ಕೇಂದ್ರಗಳು ನರಗ ಪಾಲಿಕೆ ಮತ್ತು ಪಂಚಾಯತ್ ಗಳು ಸಂಗ್ರಹಿಸುವ ತೆರಿಗೆ ಹಣವನ್ನು ನಂಬಿಕೊಂಡಿವೆ. ಬಿಬಿಎಂಪಿಗೆ ತೆರಿಗೆ ಹಣ ಕರ್ನಾಟಕದಲ್ಲಿ ಹೆಚ್ಚು ಬರುತ್ತದೆ, ಬಾಕಿ ಹಣ ನೀಡಲು ಬಿಬಿಎಂಪಿಗೆ ತಿಂಗಳಲ್ಲಿ ಮೂರು ಸಲ ಹೋಗುತ್ತೇನೆ, ಆದರೆ ಇದುವರೆಗೆ ಹಣವನ್ನು ಅಲ್ಲಿನ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಕೇಳೋಣವೆಂದು ಮೇಯರ್ ಸಂಪತ್ ರಾಜ್ ಮತ್ತು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸಂಪರ್ಕಕ್ಕೆ ಸಿಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com