
ಬೆಂಗಳೂರು: ಚುನಾವಣಾ ಗುರುತು ಚೀಟಿ ಅಕ್ರಮಕ್ಕೆ ಸಂಬಂಧಪಟ್ಟಂತೆ ದಾಖಲಾಗಿರುವ ಕೇಸಿನ ತೀರ್ಪಿನ ಮೇಲೆ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ಅವರ ಭವಿಷ್ಯ ನಿಂತಿದೆ. ಕಳೆದ ಮೇ 9ರಂದು ಮುನಿರತ್ನ ಹಾಗೂ ಇತರ 13 ಮಂದಿ ವಿರುದ್ಧ ಕೇಸು ದಾಖಲಾಗಿತ್ತು.
ಈ ಕೇಸಿನಲ್ಲಿ ಮುನಿರತ್ನ ಆರೋಪಿ ಸಂಖ್ಯೆ 14 ಆಗಿದ್ದು, ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಡಿಯಲ್ಲಿ ಮತ್ತು ಜನ ಪ್ರತಿನಿಧಿತ್ವ ಕಾಯ್ದೆಯಡಿ ಅವರ ವಿರುದ್ಧ ಕೇಸು ದಾಖಲಾಗಿವೆ. ಜಾಲಹಳ್ಳಿ ಸಮೀಪ ಅಪಾರ್ಟ್ ಮೆಂಟೊಂದರಲ್ಲಿ ಸುಮಾರು 10 ಸಾವಿರ ಚುನಾವಣಾ ಗುರುತು ಚೀಟಿ ಸಿಕ್ಕಿದ ಆಧಾರದ ಮೇಲೆ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಸು ದಾಖಲಾಗಿತ್ತು. ಚುನಾವಣಾ ಅಕ್ರಮ ನಡೆಸಲು ಮುನಿರತ್ನ ಉದ್ದೇಶಿಸಿದ್ದರು ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.
ಈ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಜಂಟಿ ಚುನಾವಣಾಧಿಕಾರಿ ಕೆ ಎನ್ ರಮೇಶ್ ಅವರನ್ನು ಸಂಪರ್ಕಿಸಿದಾಗ, ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಮುನಿರತ್ನ ಅವರ ಭವಿಷ್ಯ ನಿಂತಿದೆ ಎನ್ನುತ್ತಾರೆ.
ಶಾಸಕರು ತಪ್ಪಿತಸ್ಥ ಎಂದು ಸಾಬೀತಾಗಿ ಜೈಲಿಗೆ ಹೋದರೆ ಅವರ ಶಾಸಕತ್ವ ಅನರ್ಹವಾಗುತ್ತದೆ. ಜನಪ್ರತಿನಿಧಿ ಕಾಯ್ದೆಯ ಸಾಧ್ಯತೆಯಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಒಂದು ವೇಳೆ ಮುನಿರತ್ನ ಅವರ ಮೇಲಿನ ಆರೋಪ ಸಾಬೀತಾದರೆ ಎರಡನೇ ಅತ್ಯಂತ ಹೆಚ್ಚು ಮತ ಗಳಿಸಿರುವ ಪ್ರತಿನಿಧಿಯನ್ನು ಶಾಸಕ ಎಂದು ಘೋಷಿಸಲಾಗುತ್ತದೆ. ಅಲ್ಲದೆ ಅಪರಾಧಿ ಎನಿಸಿಕೊಂಡ ಶಾಸಕನು ಮುಂದೆ ಆರು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ.
Advertisement