ರೈತರ ಸಾಲ ಮನ್ನಾ ಪ್ರಕ್ರಿಯೆ ಆರಂಭವಾಗಿದೆ: ಸಿಎಂ ಕುಮಾರಸ್ವಾಮಿ

ರೈತರ ಸಾಲ ಮನ್ನಾಗೆ ಸಂಬಂಧಿಸಿದ ಅಗತ್ಯ ಪ್ರಕ್ರಿಯೆಗಳು ಆರಂಭವಾಗಿವೆ. ಸಾಲ ಮನ್ನಾಗಾಗಿ ಬ್ಯಾಂಕ್ ಅಧಿಕಾರಿಗಳ...
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ರೈತರ ಸಾಲ ಮನ್ನಾಗೆ ಸಂಬಂಧಿಸಿದ ಅಗತ್ಯ ಪ್ರಕ್ರಿಯೆಗಳು ಆರಂಭವಾಗಿವೆ. ಸಾಲ ಮನ್ನಾಗಾಗಿ ಬ್ಯಾಂಕ್ ಅಧಿಕಾರಿಗಳ ಜೊತೆಗೆ ಚರ್ಚೆ ಸೇರಿದಂತೆ ಹಲವು ಕೆಲಸಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಇಂದು ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಸಚಿವ ಸಂಪುಟ ವಿಸ್ತರಣೆ ತಡವಾಗಿದ್ದಕ್ಕೆ ಹಲವರು ಕಟುವಾಗಿ ಟೀಕಿಸಿದ್ದಾರೆ. ಒಂದೇ ಪಕ್ಷ ಅಧಿಕಾರಕ್ಕೆ ಬಂದಿದ್ದರೂ ಸಂಪುಟ ವಿಸ್ತರಣೆ ವೇಳೆ ಭಿನ್ನಮತ ಇದ್ದೆ ಇರುತ್ತೆ ಎಂದರು.
ಸ್ಥಿರ ಸರ್ಕಾರ ನೀಡಲು ಎರಡೂ ಪಕ್ಷಗಳು ಬದ್ಧವಾಗಿವೆ. ನಮ್ಮ ಸರ್ಕಾರ ಐದು ವರ್ಷ ಬಾಳಿಕೆ ಬರುವ ಬಗ್ಗೆ ಯಾವ ಅನುಮಾನವನ್ನೂ ಇಟ್ಟುಕೊಳ್ಳಬೇಡಿ. ಮುಂದಿನ ಅವಧಿಗೂ ನಮ್ಮ ಸಮ್ಮಿಶ್ರ ಸರ್ಕಾರವೇ ಆಡಳಿತ ನಡೆಸಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ಅನ್ನಭಾಗ್ಯ ಸೇರಿದಂತೆ ಹಿಂದಿನ ಸರ್ಕಾರ ಆರಂಭಿಸಿರುವ ಉಪಯುಕ್ತ ಯೋಜನೆಯಗಳನ್ನು ಮುಂದುವರೆಸುತ್ತೇವೆ. ಸಮನ್ವಯ ಸಮಿತಿಯ ನೇತೃತ್ವದಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು(ಕಾಮನ್ ಮಿನಿಮಮ್ ಪ್ರೋಗ್ರಾಂ) ರೂಪಿಸುತ್ತೇವೆ. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ತಮ್ಮ ಆದ್ಯತೆ ಎಂದರು.
ಇದೇ ವೇಳೆ ಪ್ರತಿಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಬಿಜೆಪಿ ನಾಯಕರು ತಮ್ಮ ರಾಜಕೀಯ ಬೆಳವಣಿಗೆಗಾಗಿ ಸಾಮಾಜಿಕ ವಾತಾವರಣ ಹಾಳುಮಾಡುತ್ತಿದ್ದಾರೆ. ರಾಜ್ಯದ ಜನತೆಗೆ ರಕ್ಷಣೆ ಕೊಡಲು ಸರ್ಕಾರ ಬದ್ಧವಾಗಿದೆ. ಯಾರನ್ನೂ ನಾವು ಟಾರ್ಗೆಟ್ ಮಾಡಲು ಬಯಸುವುದಿಲ್ಲ ಎಂದರು.
ಈ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು, ವಿಧಾನಸಭೆ ಚುನಾವಣೆ ವೇಳೆ ಎರಡೂ ಪಕ್ಷಗಳು ಎರಡು ಪ್ರತ್ಯೇಕ ಪ್ರಣಾಳಿಕೆಗಳನ್ನು ಜನರ ಮುಂದೆ ಇಟ್ಟಿದ್ದವು. ಈಗ ಎರಡೂ ಪ್ರಣಾಳಿಕೆಗಳು ಮುಖ್ಯ ಅಂಶಗಳನ್ನು ಸೇರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಗುರುತಿಸಿ ಅನುಷ್ಠಾನಗೊಳಿಸುತ್ತೇವೆ ಎಂದರು.
ಧನ ಇಲಾಖೆಯನ್ನು ಯಾರಿಗೆ ಕೊಡಬೇಕು ಎಂಬ ಬಗ್ಗೆ ಯಾವುದೇ ಗೊಂದಲ ಇಲ್ಲ. ಇಂದು ಈ ಕುರಿತು ನಾವು ಯಾರೊಂದಿಗೂ ಚರ್ಚಿಸಲೂ ಇಲ್ಲ. ಈ ಸರ್ಕಾರ ಐದು ವರ್ಷ ಆಡಳಿತ ಕೊಡುವ ಬಗ್ಗೆ ಯಾರೂ ಅನುಮಾನ ಇಟ್ಟುಕೊಳ್ಳಬೇಡಿ' ಎಂದು ಪರಮೇಶ್ವರ ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com