
ಬೆಂಗಳೂರು: ರಾಜ್ಯದ ಸುಮಾರು 24 ಲಕ್ಷ ಹಾಲು ಉತ್ಪಾದಕರಿಗೆ ರಾಜ್ಯ ಸಮ್ಮಿಶ್ರ ಸರ್ಕಾರ ಕಹಿ ಸುದ್ದಿ ನೀಡಿದ್ದು, ಜೂನ್ 1ರಿಂದ ಪೂರ್ವಾನ್ವಯವಾಗುವಂತೆ ಹಾಲು ಮಾರಾಟಗಾರರಿಗೆ ನೀಡುವ ಹಾಲಿನ ಬೆಲೆಯಲ್ಲಿ ಲೀಟರಿಗೆ 2 ರೂಪಾಯಿ ಕಡಿತ ಮಾಡಿದೆ.
ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಲ(ಕೆಎಂಎಫ್) ಪ್ರತಿದಿನ ಸುಮಾರು 75 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸುತ್ತಿದೆ. 65ಕ್ಕೂ ಹೆಚ್ಚು ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಕೆಎಂಎಫ್ ಮಾರುಕಟ್ಟೆ ಹಂಚಿಕೆಯ ಶೇಕಡಾ 70ನ್ನು ಹೊಂದಿದೆ. ಹಾಲು ಮಾರಾಟ ಮಾಡುವ ರೈತರಿಗೆ ನೀಡುವ ಬೆಲೆಯಲ್ಲಿ ಕಡಿತ ಮಾಡಿದರೂ ಹಾಲಿನ ಖರೀದಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಹಾಲಿನ ಉತ್ಪನ್ನಗಳಲ್ಲಿನ ಬೆಲೆ ಹೆಚ್ಚಳದಿಂದಾಗಿ ಹಾಲು ಖರೀದಿ ಬೆಲೆಯನ್ನು ಕಡಿತ ಮಾಡಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ, ರಾಮನಗರ ಜಿಲ್ಲಾ ಸಹಕಾರಿ ಹಾಲು ಮಾರಾಟಗಾರರ ಸೊಸೈಟಿ ಒಕ್ಕೂಟವೇ ದಿನಕ್ಕೆ 17.5 ಲಕ್ಷ ಲೀಟರ್ ಗಳಷ್ಟು ಹಾಲನ್ನು ಪ್ರತಿನಿತ್ಯ ಸಂಗ್ರಹಣೆ ಮಾಡುತ್ತದೆ. ಇವುಗಳಲ್ಲಿ 10 ಲಕ್ಷ ಲೀಟರ್ ಗಳನ್ನು ಗ್ರಾಹಕರಿಗೆ ಪೂರೈಸುತ್ತಿದ್ದು ಉಳಿದ ಹಾಲುಗಳನ್ನು ಬೇರೆ ರಾಜ್ಯಕ್ಕೆ ಸಂಗ್ರಹಣಾ ಘಟಕಗಳಿಗೆ ಕಳುಹಿಸಿ ಅದನ್ನು ಹಾಲಿನ ಪುಡಿಯನ್ನಾಗಿ ಮಾರ್ಪಾಡು ಮಾಡಲಾಗುತ್ತದೆ.
ಸಂಸ್ಕರಣೆಗೆ ಕಳುಹಿಸುವ ಪ್ರತಿ ಲೀಟರ್ ಹಾಲಿನಲ್ಲಿ ನಮಗೆ 4 ರೂಪಾಯಿ ನಷ್ಟವಾಗುತ್ತದೆ. ಹಾಲಿನ ಪುಡಿಗೆ ಮಾರ್ಪಡಿಸಲು ಕಳುಹಿಸುವ ಹಾಲಿನಿಂದ ನಮಗೆ ಅಧಿಕ ಹೊರೆ ಬೀಳುತ್ತದೆ. ಈ ನಷ್ಟವನ್ನು ಭರಿಸಬೇಕಾದರೆ ಹಾಲು ಮಾರಾಟಗಾರರಿಂದ ಖರೀದಿಸುವ ಹಾಲಿನ ಬೆಲೆಯನ್ನು ಸ್ವಲ್ಪ ಇಳಿಸಬೇಕಾಗುತ್ತದೆ ಎನ್ನುತ್ತಾರೆ ಬೆಮಲ್ ನ ನಿರ್ಗಮಿತ ಅಧ್ಯಕ್ಷ ಹೆಚ್ ಅಪ್ಪಯ್ಯ.
ಇದಕ್ಕೆ ಬದಲಾಗಿ ನಾವು ಬೆಂಬಲ ಬೆಲೆಯನ್ನು 5 ರೂಪಾಯಿಯಿಂದ 7 ರೂಪಾಯಿಗಳಿಗೆ ಹೆಚ್ಚಿಸಲು ಸರ್ಕಾರವನ್ನು ಕೇಳಿದ್ದೇವೆ ಎನ್ನುತ್ತಾರೆ ಅವರು.
Advertisement