ನನ್ನ ಸಮಸ್ಯೆ ಬಗೆಹರಿಸದ್ದಕ್ಕೆ ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ಮಾಡಿದೆ: ಆರೋಪಿ ತೇಜ್ ರಾಜ್ ಶರ್ಮ

ನನ್ನ ದೂರುಗಳಿಗೆ ಸರಿಯಾಗಿ ಸ್ಪಂದಿಸದಿದ್ದುದಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ ...
ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ
ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ

ಬೆಂಗಳೂರು: ನನ್ನ ದೂರುಗಳಿಗೆ ಸರಿಯಾಗಿ ಸ್ಪಂದಿಸದಿದ್ದುದಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ ಅವರ ಮೇಲೆ ಚಾಕುವಿನಿಂದ ಇರಿದೆ ಎಂದು 33 ವರ್ಷದ ತೇಜರಾಜ್ ಶರ್ಮ ಹೇಳಿದ್ದಾನೆ.

ಕಳೆದ ಮಾರ್ಚ್ 7ರಂದು ಬೆಂಗಳೂರಿನ ಲೋಕಾಯುಕ್ತ ಕಚೇರಿಯೊಳಗೆ ಚಾಕುವಿನಿಂದೊಗೆ ನುಗ್ಗಿದ್ದ ತೇಜರಾಜ್ ಶರ್ಮ ನೇರವಾಗಿ ಹೋಗಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರಿಗೆ ಇರಿದಿದ್ದು ದೊಡ್ಡ ಮಟ್ಟದಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಲೋಕಾಯುಕ್ತ ಕಚೇರಿಗೆ ಸಮಸ್ಯೆ ಹೊತ್ತುಕೊಂಡು ಹೋದಾಗ ಪ್ರತಿ ಬಾರಿಯೂ ಸರಿಯಾಗಿ ಸ್ಪಂದಿಸುವುದನ್ನು ಬಿಟ್ಟು ಹಾಸ್ಯ ಮಾಡಿ ನಗುತ್ತಾ ವಾಪಸ್ಸು ಕಳುಹಿಸುತ್ತಿದ್ದರು. ಇದರಿಂದ ರೊಚ್ಚಿಗೆದ್ದು ಅವರನ್ನು ಇರಿದೆ ಎಂದು ನಿನ್ನೆ ಸಿಸಿಬಿ ಅಧಿಕಾರಿಗಳ ಮುಂದೆ ಹೇಳಿದ್ದಾನೆ. ತೇಜ್ ರಾಜ್ ಶರ್ಮ ವಿರುದ್ಧ ಇತ್ತೀಚೆಗೆ 8ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ತೇಜ್ ರಾಜ್ ಶರ್ಮ ಇರಿದಿದ್ದರಿಂದ ಮೈಯೆಲ್ಲಾ ಗಂಭೀರ ಗಾಯಗೊಂಡು ವಿಶ್ವನಾಥ್ ಶೆಟ್ಟಿಯವರು ಆಸ್ಪತ್ರೆಗೆ ದಾಖಲಾಗಿದ್ದರು. ಸರ್ಕಾರಿ ಕಚೇರಿಗಳಿಗೆ ಪೀಠೋಪಕರಣಗಳನ್ನು ಪೂರೈಕೆ ಮಾಡುತ್ತಿದ್ದ ತೇಜ್ ರಾಜ್ ಶರ್ಮ ಹಲವು ಸರ್ಕಾರಿ ಅಧಿಕಾರಿಗಳ ವಿರುದ್ಧ ಸಲ್ಲಿಸಿದ್ದ ದೂರುಗಳನ್ನು ತಳ್ಳಿಹಾಕಿದ್ದರು ಎಂದು ಹೇಳಿದ್ದಾನೆ.

ದಾಳಿಯ ನಂತರ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ವಿಶ್ವನಾಥ್ ಶೆಟ್ಟಿ ಇತ್ತೀಚೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. 230 ಪುಟಗಳ ಆರೋಪಪಟ್ಟಿಯಲ್ಲಿ 58 ಸಾಕ್ಷಿಗಳು, 148 ದಾಖಲೆಗಳು ಇವೆ. ತಮಗೆ ಆಗುತ್ತಿರುವ ಅನ್ಯಾಯವನ್ನು ಸಹಿಸದೆ ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ನಡೆಸಿದೆ. ನ್ಯಾಯ ಸಿಗಲು ಲೋಕಾಯುಕ್ತರನ್ನು ಕೊಲ್ಲಲು ಯತ್ನಿಸಿದೆ. ಭಗವದ್ಗೀತೆಯ ಸಾಲುಗಳಂತೆ ಅಧರ್ಮದ ವಿರುದ್ಧ ಹೋರಾಡಿದೆ ಎಂದು ತೇಜ್ ರಾಜ್ ಶರ್ಮಾ ಹೇಳಿರುವುದಾಗಿ ದಾಖಲಾಗಿದೆ.

ಚಿಕ್ಕಪೇಟೆಯ ಸಂಡೆ ಬಜಾರ್ ನಿಂದ ರಾಮಣ್ಣ ಎಂಬುವವರಿಂದ ಚಾಕುವನ್ನು ತಂದಿದ್ದು, 60 ಸಾವಿರ ರೂಪಾಯಿಗೆ ಮೊಂಡು ಚಾಕುವನ್ನು ನೀಡಿ ಮೋಸ ಮಾಡಿದರು ಎಂದು ಆತ ಆರೋಪಿಸಿದ್ದಾನೆ.

ನ್ಯಾಯಾಲಯದಲ್ಲಿ ತೇಜ್ ರಾಜ್ ಶರ್ಮ ಪರ ವಾದಿಸಲು ಯಾರೂ ಬಾರದಿದ್ದ ಸಂದರ್ಭದಲ್ಲಿ ತನ್ನ ಮೇಲಿನ ಕೇಸಿಗೆ ತಾನೇ ವಾದ ಮಾಡಲು ಮುಂದಾಗಿರುವುದಾಗಿ ಸಿಸಿಬಿ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com