ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿದಿರುವುದು
ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿದಿರುವುದು

ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ: ಪ್ರಯಾಣಿಕರ ಪರದಾಟ

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಅಬ್ಬರದಿಂದಾಗಿ ಚಾರ್ಮಾಡಿ ಘಾಟ್​ ...

ಚಿಕ್ಕಮಗಳೂರು: ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಅಬ್ಬರದಿಂದಾಗಿ ಚಾರ್ಮಾಡಿ ಘಾಟ್​ ರಸ್ತೆಯಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದರಿಂದ ರಸ್ತೆಯಲ್ಲಿ ಬಸ್ಸು ಸೇರಿದಂತೆ ಅನೇಕ ವಾಹನಗಳ ಸಂಚಾರ ಸ್ತಬ್ಧವಾಗಿದೆ.

ಚಾರ್ಮಾಡಿ ಘಾಟ್​​ನ ರಸ್ತೆಯ 2ನೇ ಮತ್ತು 3ನೇ ತಿರುವಿನ 9 ಕಡೆಗಳಲ್ಲಿ ಇಂದು ನಸುಕಿನ ಜಾವ ಗುಡ್ಡ ಕುಸಿದು ಬೆಂಗಳೂರು ಕಡೆ ಸಂಚರಿಸುವ ಬಸ್ಸು ಸೇರಿದಂತೆ ಅನೇಕ ವಾಹನಗಳು ಇಂದು ನಸುಕಿನಿಂದ ಮುಂದಕ್ಕೆ ಸಂಚರಿಸಲಾಗದೆ ನಿಂತಿವೆ. ಬಸ್ಸಿನಲ್ಲಿರುವ ಪ್ರಯಾಣಿಕರು ಪರದಾಡುವಂತಾಗಿದೆ. ಮಕ್ಕಳು ಹಸಿವೆಯಿಂದ ಅಳುತ್ತಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಧರ್ಮಸ್ಥಳ ಹಾಗೂ ಉಜಿರೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.

ಮಳೆಗೆ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದಿದ್ದು ಸ್ಥಳೀಯರು ಮತ್ತು ಪೊಲೀಸರು ಕಾರ್ಯಾಚರಣೆ ಮಾಡಿ ರಸ್ತೆ ತೆರವು ಮಾಡುತ್ತಿದ್ದಾರೆ. ಜೆಸಿಬಿ ಯಂತ್ರಗಳಿಂದ ಮಣ್ಣು ತೆಗೆಯಲಾಗುತ್ತಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಕೊಟ್ಟಿಗೆಹಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು, ಎಸ್.ಕೆ. ಬಾರ್ಡರ್ ಹಾಗೂ ಕುದುರೆಮುಖ ಮೂಲಕವೂ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಾಣಿ – ಮೈಸೂರು ಹೆದ್ದಾರಿಯಲ್ಲಿ ವಾಹನ‌ ಸಂಚಾರಕ್ಕೆ ಅನುವು ಮಾಡಲಾಗಿದ್ದು, ರಾತ್ರಿಯಿಡಿ ಸಿಬ್ಬಂದಿ ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಧಾರಾಕಾರ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಇತ್ತ ಚಿಕ್ಕಮಗಳೂರಿನ 4 ತಾಲೂಕುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ರಾಜ್ಯದಲ್ಲಿ ವರುಣನ ಅಬ್ಬರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಹೊರನಾಡು ಸಮೀಪದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಕಳಸ - ಹೊರನಾಡು ರಸ್ತೆ ಸಂಚಾರ ಬಂದ್ ಆಗಿದೆ. ಇತ್ತ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳಲ್ಲಿ ಸುರಿದ ಭಾರೀ ಮಳೆಯಾಗುತ್ತಿದ್ದು ಭದ್ರಾ, ತುಂಗಾ, ಹೇಮಾವತಿ ನದಿಗಳ ಒಳಹರಿವು ಹೆಚ್ಚಳವಾಗಿದೆ. ಸತತ ಮಳೆಯಿಂದ ಶೃಂಗೇರಿ, ಎನ್.ಆರ್.ಪುರ, ಕೊಪ್ಪ, ಮೂಡಿಗೆರೆ ತಾಲೂಕುಗಳ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಇತ್ತ ಹಾಸನ ಜಿಲ್ಲೆಯಲ್ಲೂ ಮಳೆರಾಯನ ಆರ್ಭಟ ಜೋರಾಗಿದೆ. ಹಾಸನ, ಸಕಲೇಶಪುರ, ಆಲೂರು ಸೇರಿದಂತೆ ಜಿಲ್ಲೆಯ ಹಲವು ಕಡೆ ಎಡಬಿಡದೆ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿದು, ಜನ ಜೀವನ ಅಸ್ತವ್ಯಸ್ತವಾಗಿದೆ.

ಇನ್ನು ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾವೇರಿ ನದಿಯಲ್ಲಿನ ನೀರಿನ ಮಟ್ಟ ಏರಿಕೆಯಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com