ಗೌರಿ ಲಂಕೇಶ್ ಹತ್ಯೆಯ ರೂವಾರಿ ಅಮೋಲ್ ಕಾಳೆ: ಎಸ್ ಐಟಿ ಅಧಿಕಾರಿಗಳು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಮುಖ್ಯ ರೂವಾರಿ ಅಮೋಲ್ ಕಾಳೆ ಎಂದು ವಿಶೇಷ ತನಿಖಾ ...
ಗೌರಿ ಲಂಕೇಶ್ (ಸಂಗ್ರಹ ಚಿತ್ರ )
ಗೌರಿ ಲಂಕೇಶ್ (ಸಂಗ್ರಹ ಚಿತ್ರ )

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಮುಖ್ಯ ರೂವಾರಿ ಅಮೋಲ್ ಕಾಳೆ ಎಂದು ವಿಶೇಷ ತನಿಖಾ ದಳ(ಎಸ್ಐಟಿ) ಅಧಿಕಾರಿಗಳು ಹೇಳಿದ್ದಾರೆ. ಈತ ಕಟ್ಟಾ ಹಿಂದುತ್ವವಾದಿಯಾಗಿದ್ದು ಹಿಂದೂ ಧರ್ಮದ ರಕ್ಷಣೆಗೆ ಹೋರಾಟ ನಡೆಸುವವರನ್ನು ತನ್ನ ಸಂಘಟನೆಗೆ ಸೇರಿಸಿಕೊಳ್ಳುವ ಕೆಲಸದಲ್ಲಿ ನಿರತನಾಗಿದ್ದ ಎನ್ನುತ್ತಾರೆ.

ಹಲವು ಹಿಂದೂಪರ ಸಂಘಟನೆಗಳ ಬಗ್ಗೆ ನಿಷ್ಠೆ ಹೊಂದಿದ್ದ ಕಾಳೆಗೆ ಗೌರಿ ಲಂಕೇಶ್ ಹತ್ಯೆಯ ಕೆಲಸವನ್ನು ವಹಿಸಲಾಗಿತ್ತು. ತನಗೆ ಸಿಕ್ಕಿದ ಸೂಚನೆಯಂತೆ ಆತ ಗೌರಿ ಲಂಕೇಶ್ ಹತ್ಯೆಗೆ ಅಮಿತ್ ದೆಗ್ವೇಕರ್ ಜೊತೆ ಚರ್ಚೆ ನಡೆಸಿದ್ದಲ್ಲದೆ ತನ್ನ ಕೆಲಸಕ್ಕೆ ಹಲವರನ್ನು ಸಂಪರ್ಕಿಸಿದ್ದ ಎಂದು ಎಸ್ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಕಾಳೆ ಗೌರಿ ಹತ್ಯೆಗೆ ಮುನ್ನ ಆರೋಪಿಗಳನ್ನು ಧಾರ್ಮಿಕ ಸಭೆಗಳ ಮೂಲಕ ಭೇಟಿ ಮಾಡುತ್ತಿದ್ದ. ತಂಡದ ಸದಸ್ಯರನ್ನು ಸಂಪರ್ಕಿಸಲು ಖಾಸಗಿ ದೂರವಾಣಿಯನ್ನು ಬಳಸುತ್ತಿರಲಿಲ್ಲ. ಪಬ್ಲಿಕ್ ಬೂತ್ ಮೂಲಕ ಫೋನ್ ಮಾಡಿ ಸಂಪರ್ಕಿಸುತ್ತಿದ್ದ. ಆದರೆ ತಾನು ಎಲ್ಲಿ ವಾಸವಿದ್ದೇನೆ, ಏನು ಕೆಲಸ ಮಾಡುತ್ತಿದ್ದೇನೆ ಎಂದು ಅಮೋಲ್ ಕಾಳೆ ಬೇರೆಯವರಿಗೆ ಹೇಳುತ್ತಿರಲಿಲ್ಲ.

ಹಿಂದೂ ಧರ್ಮ ರಕ್ಷಣೆಗೆ ತಮ್ಮೆಲ್ಲರ ಸಹಕಾರ ಬೇಕು ಎಂದು ಇತರರನ್ನು ಪುಸಲಾಯಿಸುತ್ತಿದ್ದ. ಆರಂಭದ ಹಂತದಲ್ಲಿ ಒಬ್ಬರನ್ನು ಕೊಲೆ ಮಾಡಲು ತಾನು ಯೋಜನೆ ರೂಪಿಸುತ್ತಿರುವುದಾಗಿ ಅದಕ್ಕೆ ತಮ್ಮ ಸಹಕಾರ ಬೇಕೆಂದು ಆತ ಕೇಳುತ್ತಿರಲಿಲ್ಲ. ಆರ್ಥಿಕ ಸಹಾಯ ಮತ್ತು ಇತರ ರೀತಿಯ ನೆರವು ಕೇಳುತ್ತಿದ್ದ. ಕೊನೆಯ ಹಂತದಲ್ಲಿ ಮಾತ್ರ ಕೊಲೆಗೆ ತಮ್ಮ ಸಹಕಾರ ಬೇಕೆಂದು ಕೇಳುತ್ತಿದ್ದ ಎಂದು ತನಿಖಾಧಿಕಾರಿಗಳು ಕಾಳೆ ಬಗ್ಗೆ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com