ಕೃಷಿ ಸಾಲ ಮನ್ನಾ: 15 ದಿನಗಳ ಅವಧಿ ಮುಕ್ತಾಯ, ಇನ್ನೂ ಭರವಸೆಯಾಗಿಯೇ ಉಳಿದ ಯೋಜನೆ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಮಹತ್ವದ ಭರವಸೆ ರೈತರ ಸಾಲ ಮನ್ನಾ ಆಗಿದ್ದು ಸಮ್ಮಿಶ್ರ ಸರ್ಕಾರದ ಸಂದರ್ಭ ಅದು ಅಷ್ಟು ಸುಲಭವಾಗಿಲ್ಲ ಎನ್ನುವುದು ಸಾಬೀತಾಗಿದೆ.
ಮುಖ್ಯಮಂತ್ರಿ  ಎಚ್.ಡಿ.ಕುಮಾರಸ್ವಾಮಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಮುಖ್ಯಮಂತ್ರಿ  ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಮಹತ್ವದ ಭರವಸೆ ರೈತರ ಸಾಲ ಮನ್ನಾ ಆಗಿದ್ದು ಸಮ್ಮಿಶ್ರ ಸರ್ಕಾರದ ಸಂದರ್ಭ ಅದು ಅಷ್ಟು ಸುಲಭವಾಗಿಲ್ಲ ಎನ್ನುವುದು ಸಾಬೀತಾಗಿದೆ. ಕಳೆದ ಬಾರಿ ರೈತರ ಸಭೆ ನಡೆದಾಗ 15 ದಿನಗಳ ಕಾಲಾವಕಾಶ ಕೇಳಿದ್ದ ಮುಖ್ಯಮಂತ್ರಿಗಳು ಆ ಕಾಲಾವಧಿಯಲ್ಲಿ ಸಾಲ ಮನ್ನಾದ ಕುರಿತಂತೆ ಸರಿಯಾದ ನಿರ್ಧಾರಕ್ಕೆ ಬರಲು ವಿಫಲರಾಗಿದ್ದಾರೆ.
ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿ ಪ್ರಥಮ ಬಾರಿಗೆ ಸಭೆ ನಡೆಸಿದ್ದು ಈ ಸಭೆಯಲ್ಲಿ ರೈತರ ಸಾಲಮನ್ನಾ ಸಂಬಂಧ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುತ್ತದೆಂದು ಭಾವಿಸಲಾಗಿತ್ತು. ಆದರೆ  ಸಭೆಯಲ್ಲಿ ಸರ್ಕಾರದ ಸುಗಮ ಕಾರ್ಯನಿರ್ವಹಣೆಗಾಗಿ ಹತ್ತು ದಿನಗಳಲ್ಲಿ ಸಾಮಾನ್ಯ ಕನಿಷ್ಟ ಕಾರ್ಯಕ್ರಮ(ಸಿಎಂಪಿ) ಜಾರಿ, ವಿವಿಧ  ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಕ್ಕಾಗಿ ಏಳು ದಿನಗಳ ಗಡುವು ನೀಡಿದೆಯಲ್ಲದೆ ಸಾಲ ಮನ್ನಾ ದ ಕುರಿತ ಯಾವ ನಿರ್ಧಾರಕ್ಕೆ ಬಂದಿಲ್ಲ.
ಸಿಎಂಪಿ ಜಾರಿಗಾಗಿ ರಚಿಸಲಾಗುವ ಐದು ಸದಸ್ಯರ ಸಮಿತಿಯು ಕೃಷಿ ಸಾಲ ಮನ್ನಾದ ಸಂಬಂಧ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ..'ಎರಡೂ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಭರವಸೆಗಳನ್ನು ನೀಡಿದೆ. ಆದರೆ . ಅವುಗಳಲ್ಲಿ ಕೆಲವು ಭರವಸೆ ಈಡೇರಿಕೆಗೆ ಪ್ರಾಯೋಗಿಕ ತೊಂದರೆಗಳಿವೆ.  ಸಮಿತಿಯು ಎಲ್ಲಾ ಭರವಸೆಗಳನ್ನು ಅಧ್ಯಯನ ಮಾಡಿ ಪ್ರಾಯೋಗಿಕವಾಗಿ ಸಾಧ್ಯಾ ಸಾಧ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ" ಎಂದ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದಲ್ಲಿ ರೈತರಿಗೆ ನೀಡಿದ ಭರವಸೆ ಈಡೇರಿಸುವಲ್ಲಿ ಅಡ್ಡಿಗಳಿದೆ ಎನ್ನುವ ಸುಳಿವನ್ನೂ ನೀಡಿದ್ದಾರೆ.
"ನಾವು ರೈತರ  ಸಾಲ ಮನ್ನಾ ಭರವಸೆ ಈಡೇರಿಕೆಗೆ 15 ದಿನಗಳ ಕಾಲಾವಧಿಯನ್ನು ನಿಗದಿಗೊಳಿಸಲು ಸಾಧ್ಯವಿಲ್ಲ.  ಇದು ಸಾವಿರಾರು ಕೋಟಿ ವ್ಯವಹಾರ.  ನಾವು (ಕಾಂಗ್ರೆಸ್) ಕುಮಾರಸ್ವಾಮಿಯವರು ನೀಡಿದ ಭರವಸೆಗೆ ಬದ್ದರಾಗಿದ್ದೇವೆ. ಆದರೆ ನಮಗೆ ಸಮಯ ಬೇಕು" ಉಪ ಮುಖ್ಯಮಂತ್ರಿ  ಜಿ.ಪರಮೇಶ್ವರ ಹೇಳಿದ್ದಾರೆ.
"ಕುಮಾರಸ್ವಾಮಿ ನೀಡಿದ ಯಾವ ಭರವಸೆಯೂ  ಈಡೇರಿಲ್ಲ.  ಹಿಂದಿನ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ ಸಾಲ ಮನ್ನಾ ಸಹಿತ ಇದುವರೆಗೆ ಜಿಲ್ಲಾಡಳಿತ, ಬ್ಯಾಂಕುಗಳಿಗೆ ತಲುಪಿಲ್ಲ. ಇದು ಸಮ್ಮಿಶ್ರ ಸರ್ಕಾರ, ಇಲ್ಲಿ ಇಬ್ಬರೂ ಒಬ್ಬರತ್ತ ಇನ್ನೊಬ್ಬರು ಬೆರಳು ತೋರಿಸಿಕೊಂಡೇ ಕಾಲ ಕಳೆಯುತ್ತಾರೆ."  ಬೀದರ್ ನ ರೈತ ಶಾಂತಮ್ಮ ಮುಲಾಯ್ ಹೇಳಿದ್ದಾರೆ.
"ಬ್ಯಾಂಕುಗಳು ಸರ್ಕಾರಿ ಅಧಿಕಾರಿಗಳು ನಮಗೆ ಸಾಲ ಮನ್ನಾದ ಕುರಿತಂತೆ ಯಾವ ಸ್ಪಷ್ಟನೆ ನೀಡಿಲ್ಲ. ನಾವಿನ್ನೂ ನಿರೀಕ್ಷಣೆಯಲ್ಲಿದ್ದೇವೆ. ಎಲ್ಲೋ ಒಂದು ಚಿಕ್ಕ ಭರವಸೆ ಇದೆ. ಆದರೆ ರೈತರು ಎಲ್ಲಿಗೆ ಹೋಗಬೇಕು? ಸಾಲ ಮನ್ನಾ ಭರವಸೆ ಕೇವಲ ಭರವಸೆಯಾಗಿ ಉಳಿದಿದೆ. ನೋಡಲ್ ಅಧಿಕಾರಿ ಯಾರು, ನಾವೇನು ದಾಖಲೆ ಸಲ್ಲಿಸಬೇಕು ಯಾವುದೂ ಗೊತ್ತಿಲ್ಲ. ಸರ್ಕಾರದಿಂದ ಯಾವ ಮಾತುಕತೆಯೂ ಇಲ್ಲ" ಮುಲಾಯ್ ನಿರಾಸೆ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ ಕೃಷಿ ಸಚಿವ ಎನ್ ಎಚ್ ಶಿವಶಂಕರ ರೆಡ್ಡಿ ಸಾಲ ಮನ್ನಾ ಸಂಬಂಧ ಕೆಲಸ ನ್ಡೆಯುತ್ತಿದೆ. ವಿವರಗಳನ್ನು ಶೀಘ್ರವಾಗಿ ಬಹಿರಂಗಪಡಿಸುತ್ತೇವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com