ಇನ್ನು ಮುಂದೆ ಯಾನ, ವಿಭೂತಿ ಜಲಪಾತ ತಾಣಗಳು ಪ್ಲಾಸ್ಟಿಕ್ ಮುಕ್ತ ಪ್ರದೇಶಗಳು

ಸಾಮಾನ್ಯವಾಗಿ ಪ್ರವಾಸ, ಪಿಕ್ ನಿಕ್ ಹೋಗುವವರು ತಮ್ಮ ಜೊತೆ ತಿಂಡಿ ತಿನಿಸುಗಳನ್ನು...
ಯಾನ ಗುಹೆಯ ಕಲ್ಲುಗಳು
ಯಾನ ಗುಹೆಯ ಕಲ್ಲುಗಳು

ಕಾರವಾರ/ಗದಗ: ಸಾಮಾನ್ಯವಾಗಿ ಪ್ರವಾಸ, ಪಿಕ್ ನಿಕ್ ಹೋಗುವವರು ತಮ್ಮ ಜೊತೆ ತಿಂಡಿ ತಿನಿಸುಗಳನ್ನು, ಕುರುಕಲು ತಿಂಡಿಗಳನ್ನು ಒಯ್ಯುವುದು ಸಾಮಾನ್ಯ. ಹಲವರು ಪ್ರವಾಸಿ ಸ್ಥಳಗಳಲ್ಲಿ ಪ್ಲಾಸ್ಟಿಕ್ ಚೀಲಗಳು, ತಿಂಡಿಗಳ ಕವರ್ ಗಳು, ಪ್ಲಾಸ್ಟಿಕ್ ಬಾಟಲ್ ಗಳನ್ನು ಅಲ್ಲಲ್ಲೇ ಎಸೆದು ಹೋಗಿ ಪರಿಸರ ನಾಶ ಮಾಡುತ್ತಾರೆ. ಇನ್ನು ಮುಂದೆ ವನ್ಯಜೀವಿ ತಾಣ ಮತ್ತು ಪ್ರಕೃತಿಯ ಸುಂದರ ಪ್ರದೇಶಗಳಿಗೆ, ಉತ್ತರ ಕನ್ನಡದ ಯಾನ ಗುಹೆ ಮತ್ತು ವಿಭೂತಿ ಜಲಪಾತ ತಾಣಗಳಿಗೆ ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದುಕೊಂಡು ಹೋಗುವವರು ಎಚ್ಚರವಹಿಸಿ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಅರಣ್ಯ ಇಲಾಖೆ ವಲಯ ಗುಹೆ ಮತ್ತು ಜಲಪಾತಗಳನ್ನು ಪ್ಲಾಸ್ಟಿಕ್ ಮುಕ್ತ ವಲಯಗಳನ್ನಾಗಿ ಮಾಡಲು ಮುಂದಾಗಿದೆ. ಈ ಸಂಬಂಧ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿದೆ. ಗದಗದ ಬಿಂಕದಕಟ್ಟಿ ಮೃಗಾಲಯ ಒಂದು ವಾರದ ಹಿಂದೆಯೇ ಪ್ಲಾಸ್ಟಿಕ್ ವಸ್ತು ಕೊಂಡೊಯ್ಯುವುದಕ್ಕೆ ನಿಷೇಧ ಹೇರಿದೆ.

ಮೃಗಾಲಯದ ಗೇಟಿನಲ್ಲಿ ಸಿಬ್ಬಂದಿ ಪ್ರವಾಸಿಗರು ಮೃಗಾಲಯದ ಒಳಗೆ ತೆಗೆದುಕೊಂಡು ಹೋಗುವ ಪ್ರತಿ ಪ್ಲಾಸ್ಟಿಕ್ ವಸ್ತುಗಳ ಮೇಲೆ ಸ್ಟಿಕರ್ ಅಂಟಿಸುತ್ತಾರೆ. ಹಿಂತಿರುಗಿ ಬರುವಾಗ ತೆಗೆದುಕೊಂಡು ಹೋದ ವಸ್ತುಗಳನ್ನು ತೋರಿಸಬೇಕಾಗುತ್ತದೆ. ಪ್ರವಾಸಿಗರು ಒಳಗೆ ಹೋಗುವಾಗ ಯಾವುದೇ ಜಂಕ್ ಫುಡ್ ನ್ನು ತೆಗೆದುಕೊಂಡು ಹೋಗುವಂತಿಲ್ಲ.

ಗುಹೆ ಮತ್ತು ಜಲಪಾತಗಳಿಗೆ ಹೋಗುವ ಪ್ರವಾಸಿಗರಿಗೆ ಸಹ ಇದೇ ರೀತಿಯ ನಿಯಮವನ್ನು ಹೊನ್ನಾವರ ಅರಣ್ಯ ಇಲಾಖೆ ಹೇರಿದೆ. ಉತ್ತರ ಕನ್ನಡ ಜಿಲ್ಲೆಯ ಯಾನ ಗುಹೆ ಮತ್ತು ವಿಭೂತಿ ಜಲಪಾತ ಉತ್ತಮ ಪ್ರವಾಸಿ ಸ್ಥಳ. ಇಲ್ಲಿ ಪಶ್ಚಿಮ ಘಟ್ಟದ ಪ್ರಕೃತಿ ವೈವಿಧ್ಯತೆ ಕೂಡ ಸಂಪದ್ಭರಿತವಾಗಿದೆ. ಈ ಎರಡು ಪ್ರದೇಶಗಳನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಘೋಷಿಸಲು ಅರಣ್ಯ ಇಲಾಖೆ ಮುಂದಾಗಿದೆ ಎನ್ನುತ್ತಾರೆ ಹೊನ್ನಾವರ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ.

ಯಾನ ಗುಹೆ ಮತ್ತು ವಿಭೂತಿ ಜಲಪಾತ ಜೈವಿಕವಾಗಿ ಸೂಕ್ಷ್ಮವಲಯಗಳಾಗಿವೆ. ಕುಮಟಾ ತಾಲ್ಲೂಕಿನಲ್ಲಿರುವ ಯಾನ ಎರಡು ಬೃಹತ್ ಕಲ್ಲುಗಳಿಗೆ ಜನಪ್ರಿಯ. ಸಾವಿರಾರು ವರ್ಷಗಳಿಂದ ನಿಂತಿರುವ ಈ ಕಲ್ಲುಗಳ ಸುತ್ತ ದಟ್ಟ ಪಶ್ಚಿಮ ಘಟ್ಟದ ಅರಣ್ಯವಿದೆ. ಇಲ್ಲಿಂದ 8 ಕಿಲೋ ಮೀಟರ್ ದೂರದಲ್ಲಿರುವ ವಿಭೂತಿ ಜಲಪಾತದ ಪ್ರಕೃತಿ ಸೌಂದರ್ಯ ನಿತ್ಯವೂ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಈ ಪ್ರದೇಶಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ನಾವು ಈಗಾಗಲೇ ಸ್ಥಳೀಯರಿಗೆ, ಅರಣ್ಯ ಇಲಾಖೆ ಸಿಬ್ಬಂದಿದೆ, ಹತ್ತಿರದ ಅಂಗಡಿ ಮಾಲಿಕರಿಗೆ ಅರಿವು ಮೂಡಿಸಿದ್ದೇವೆ. ಅಂಗಡಿ ಮಾಲಿಕರು ಸೂಚನಾ ಫಲಕಗಳನ್ನು ಹಾಕಿದ್ದಾರೆ ಎಂದು ವಸಂತ ರೆಡ್ಡಿ ಹೇಳುತ್ತಾರೆ.

ಗದಗ ಜಿಲ್ಲೆಯ ಮೃಗಾಲಯದ ಆಡಳಿತ ವರ್ಗದ ನಿರ್ಧಾರವನ್ನು ಸ್ಥಳೀಯರು, ಪ್ರವಾಸಿಗರು ಸ್ವಾಗತಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com