ಮಲ್ಲಳ್ಳಿ ಜಲಪಾತ
ಮಲ್ಲಳ್ಳಿ ಜಲಪಾತ

ಮಡಿಕೇರಿ: ಜಲಪಾತದ ಬಳಿ ಸೆಲ್ಫಿ ತೆಗೆಯಲು ಹೋದ ಯುವಕ ನೀರುಪಾಲು

ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಳ್ಳ ಹೋಗಿ ಕಾಲು ಜಾರಿ ಬಿದ್ದು ಯುವಕನೊಬ್ಬ ನೀರುಪಾಲಾದ ಘಟನೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದೆ.
Published on
ಮಡಿಕೇರಿ: ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಳ್ಳ ಹೋಗಿ ಕಾಲು ಜಾರಿ ಬಿದ್ದು ಯುವಕನೊಬ್ಬ ನೀರುಪಾಲಾದ ಘಟನೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದೆ.
ಕೊಡಗಿನ ಸೋಮವಾರಪೇಟೆ ಪ್ರಸಿದ್ದ ಮಲ್ಲಳ್ಳಿ ಜಲಪಾತದ ಸಮೀಪ ಸೆಲ್ಫಿ ತೆಗೆದುಕೊಳ್ಳಲು ಮುಂದಾದ  ಮನೋಜ್ (24) ಎನ್ನುವಾತ ಸಾವನ್ನಪ್ಪಿದ್ದಾನೆ.
ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಕೂಡಿಗೆ ಗ್ರಾಮದ ನಿವಾಸಿಯಾದ ಈತ  ಶುಕ್ರವಾರ  ತನ್ನ ಆರು ಸ್ನೇಹಿತರೊಡನೆ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ.  ಕಾರ್ಯಕ್ರಮ ಮುಗಿಸಿ ಹಿಂತಿರುಗುವಾಗ ಜಲಪಾತ ವೀಕ್ಷಣೆಗೆ ಆಗಮಿಸಿದ್ದಾರೆ. ಮಳೆಯ ಕಾರಣ ಜಲಪಾತದಲ್ಲಿ ನೀರು ಅಧಿಕವಾಗಿದ್ದು ಜಲಪಾತದ ಸೌಂದರ್ಯ ಮನಸೂರೆಗೊಳ್ಳುವಂತಿತ್ತು.
ಜಲರಾಶಿಯ ಸೌಂದರ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲು ಮುಂದಾದ ಮನೋಜ್ ಸ್ನೇಹಿತರ ಮಾತು ಕೇಳದೆ ನೀರಿನ ಸಮೀಪಕ್ಕೆ ತೆರಳಿದ್ದಾನೆ.ಹಾಗೆ ತೆರಳಿದ್ದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದು ಆತನ ದೇಹ ಕಾಣೆಯಾಗಿತ್ತು.
ವಿಚಾರ ತಿಳಿದ ಅಗ್ನಿಶಾಮಕ ಪಡೆ ಘಟನಾ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಾಚರಣೆ ನಡೆಸಿದ್ದರೂ ಸಹ ಮಳೆ, ನೀರಿನ ರಭಸದ ಪರಿಣಾಮ ನಾಲ್ಕು ಗಂಟೆಗಳ ಶೋಧಕಾರ್ಯ ಕೈಗೂಡಲಿಲ್ಲ.
ಮನೋಜ್ ಪೋಷಕರು ಸ್ಥಳಕ್ಕೆ ಆಗಮಿಸಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿದೆ.
"ನೀರಿನ ರಭಸ ಅಧಿಕವಾಗಿದ್ದು ಶವ ಇರುವ ಜಾಗ ಪತ್ತೆ ಮಾಡುವುದು ಅಸಾಧ್ಯವಾಗಿದೆ.ನೀರು ಕಡಿಮೆಯಾದ ಪಕ್ಷದಲ್ಲಿ ಕಾರ್ಯಾಚರಣೆ ಮುಂದುವರಿಸಬಹುದು" ಎಂದು ಠಾಣಾಧಿಕಾರಿ ಶಿವಣ್ಣ ಹೇಳಿದ್ದಾರೆ.
ಅಪಾಯದ ಜಾಗಕ್ಕೆ ತೆರಳದಂತೆ ಸೂಚನಾ ಫಲಕ ಹಾಕಿದ್ದರೂ  ಪ್ರವಾಸಿಗರು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಹುಚ್ಚು ಸಾಹಸ ಮಾಡಿ ಜೀವ ಕಳೆದುಕೊಳ್ಳ್ಲುತ್ತಿದ್ದಾರೆ. ಕೆಲವು ವರ್ಷಗಳಿಂದ ಇಂತಹಾ ಪ್ರಕರಣ ಆಗಾಗ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

X

Advertisement

X
Kannada Prabha
www.kannadaprabha.com