
ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಸೇವಾವಧಿಯನ್ನು ವಿಸ್ತರಿಸುವ ನಿರ್ಧಾರದಿಂದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಿಂದೆ ಸರಿದಿದ್ದಾರೆ.
ಮೂರು ತಿಂಗಳವರೆಗೆ ರತ್ನಪ್ರಭಾ ಅವರ ಸೇವಾವಧಿಯನ್ನು ವಿಸ್ತರಿಸುವಂತೆ ಕೋರಿ ಮುಖ್ಯಮಂತ್ರಿ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಇದೀಗ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ಆಣತಿಯಂತೆ ಪತ್ರವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸರ್ಕಾರದ ಮುಖ್ಯ ಹುದ್ದೆಗಳಿಗೆ ನೇಮಕಾತಿ ಮಾಡಿದ್ದ ಅಧಿಕಾರಿಗಳನ್ನು ಬೇರೆ ಇಲಾಖೆಗಳಿಗೆ ಬದಲಾವಣೆ ಮಾಡಬೇಕೆಂಬುದು ಜೆಡಿಎಸ್ ತಂತ್ರವಾಗಿದೆ ಎಂದು ತಿಳಿದುಬಂದಿದೆ.ಮುಂದಿನ ಕೆಲ ದಿನಗಳಲ್ಲಿ ಅಧಿಕಾರಿಗಳ ಬದಲಾವಣೆ ನಡೆಯುವ ಸಾಧ್ಯತೆಯಿದೆ.
ನಿನ್ನೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದೆ. ತಮ್ಮ ಆಡಳಿತ ಕಾರ್ಯವೈಖರಿಗೆ ಸಮನಾದ ಅಧಿಕಾರಿಗಳನ್ನು ನೇಮಕ ಮಾಡುವ ಉತ್ಸುಕದಲ್ಲಿ ಮುಖ್ಯಮಂತ್ರಿಗಳಿದ್ದಾರೆ ಎನ್ನಲಾಗಿದೆ.
ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಕೋರಿ ಮುಖ್ಯಮಂತ್ರಿ ಬರೆದಿದ್ದ ಪತ್ರಕ್ಕೆ ಕೇಂದ್ರ ಸರ್ಕಾರ ಇದುವರೆಗೆ ಪ್ರತಿಕ್ರಿಯಿಸಿಲ್ಲ. ಜೂನ್ 30ರೊಳಗೆ ಪ್ರತಿಕ್ರಿಯೆ ಬಾರದಿದ್ದರೆ ಮುಖ್ಯಮಂತ್ರಿಗಳು ಹೊಸ ಮುಖ್ಯ ಕಾರ್ಯದರ್ಶಿಗಳನ್ನು ನೇಮಕ ಮಾಡಬಹುದು ಎಂದು ಸಭೆಯ ಬಳಿಕ ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣ ಭೈರೇಗೌಡ ಸುದ್ದಿಗಾರರಿಗೆ ತಿಳಿಸಿದರು.
ಈ ಬಗ್ಗೆ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರನ್ನು ಕೇಳಿದಾಗ, ನನಗೆ ಈ ಬಗ್ಗೆ ತಿಳಿದಿಲ್ಲ. ಕಳೆದ ವರ್ಷ ಡಿಸೆಂಬರ್ ನಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದ ರತ್ನಪ್ರಭಾ ಮಾರ್ಚ್ ತಿಂಗಳಿನಲ್ಲಿ ನಿವೃತ್ತಿ ಹೊಂದಬೇಕಿತ್ತು. ಆದರೆ ಹಿಂದಿನ ಸಿದ್ದರಾಮಯ್ಯ ನೇತೃತೃದ ಸರ್ಕಾರ ಮೂರು ತಿಂಗಳವರೆಗೆ ಅವರ ಸೇವಾವಧಿಯನ್ನು ವಿಸ್ತರಿಸಿತ್ತು. 1981ರ ಬ್ಯಾಚಿನ ಐಎಎಸ್ ಅಧಿಕಾರಿಯಾದ ಅವರು ಕರ್ನಾಟಕದಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆ ವಹಿಸಿದ ಮೂರನೇ ಮಹಿಳೆ ಎಂದರು.
ರತ್ನಪ್ರಭಾ ಅವರ ಸ್ಥಾನಕ್ಕೆ ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್ ಮತ್ತು ಹಿರಿಯ ಐಎಎಸ್ ಅಧಿಕಾರಿ ಎಸ್ ಕೆ ಪಟ್ಟನಾಯಕ್ ಅವರ ಹೆಸರುಗಳು ಕೇಳಿಬರುತ್ತಿವೆ.
Advertisement