ನನ್ನ ತಮ್ಮ ಕೊಲೆಯಲ್ಲಿ ಭಾಗಿಯಾಗಿಲ್ಲ: ಗೌರಿ ಲಂಕೇಶ್ ಹತ್ಯೆಯ ಶಂಕಿತ ಆರೋಪಿ ನವೀನ್ ಸಹೋದರ ಪ್ರತಿಕ್ರಿಯೆ

ಅಕ್ರಮ ಶಸ್ತಾಸ್ತ್ರ ಪೂರೈಕೆದಾರ ಮತ್ತು ಬಲಪಂಥೀಯ ಕಾರ್ಯಕರ್ತ ಕೆ.ಟಿ.ನವೀನ್ ಕುಮಾರ್ ....
ಪತ್ರಕರ್ತೆ ಗೌರಿ ಲಂಕೇಶ್(ಸಂಗ್ರಹ ಚಿತ್ರ)
ಪತ್ರಕರ್ತೆ ಗೌರಿ ಲಂಕೇಶ್(ಸಂಗ್ರಹ ಚಿತ್ರ)

ಬೆಂಗಳೂರು: ಅಕ್ರಮ ಶಸ್ತಾಸ್ತ್ರ ಪೂರೈಕೆದಾರ ಮತ್ತು ಬಲಪಂಥೀಯ ಕಾರ್ಯಕರ್ತ ಕೆ.ಟಿ.ನವೀನ್ ಕುಮಾರ್ ಅವರಿಂದ ಗನ್ ಗಳನ್ನು ಯಾರು ತೆಗೆದುಕೊಂಡು ಬಂದರು ಎಂದು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ವಿಚಾರದಲ್ಲಿ ತನಿಖೆ ನಡೆಸುತ್ತಿದ್ದು, ಇನ್ನೊಂದೆಡೆ ನವೀನ್ ಕುಮಾರ್ ಕುಟುಂಬದವರು ಈ ಘಟನೆಯಲ್ಲಿ ನವೀನ್ ಕುಮಾರ್ ಅವರ ಯಾವುದೇ ಪಾತ್ರವಿಲ್ಲ, ಅವರು ಮುಗ್ಧರು ಎಂದು ಹೇಳಿದ್ದಾರೆ.

ನವೀನ್ ಅವರ ಹಿರಿಯ ಸೋದರ ತಿಮ್ಮೇಗೌಡ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಶಿವರಾತ್ರಿ ಆಚರಣೆ ಮರುದಿನ ಪೊಲೀಸರು ನವೀನ್ ಕುಮಾರ್ ನನ್ನು ಹಿಡಿದು ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ನನಗೆ ತಿಳಿಸಿದ್ದು ಫೆಬ್ರವರಿ 17ರಂದು. ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ನವೀನ್ ಕುಮಾರ್ ನನ್ನು ನಾನು ಭೇಟಿ ಮಾಡಲು ಹೋದಾಗ ತನ್ನನ್ನು ರಕ್ಷಿಸುವಂತೆ ಅಂಗಲಾಚಿ ಬೇಡಿಕೊಂಡನು. ಕೊಲೆಯಲ್ಲಿ ಭಾಗಿಯಾಗಿದ್ದರೆ ತಪ್ಪೊಪ್ಪಿಕೋ ಎಂದು ಹೇಳಿದ್ದೆ. ಆದರೆ ಅವನು ಪದೇ ಪದೇ ನಾನು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ, ನನಗೇನು ಗೊತ್ತಿಲ್ಲ ಎಂದೇ ಹೇಳುತ್ತಿದ್ದಾನೆ. ಒಬ್ಬ ವ್ಯಕ್ತಿಯನ್ನು ಕೊಲೆ ಮಾಡುವಷ್ಟು ನನ್ನ ತಮ್ಮ ಕೆಟ್ಟವನಲ್ಲ ಎಂಬುದು ನನಗೆ ಗೊತ್ತು ಎಂದಿದ್ದಾರೆ.

ಗೌರಿ ಲಂಕೇಶ್ ಕೊಲೆಯಲ್ಲಿ ನವೀನ್ ಕುಮಾರ್ ಭಾಗಿಯಾಗಿದ್ದಾನೆ ಎಂದು ಕನ್ನಡ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡುತ್ತಿದೆ. ಆದರೆ ಅದು ನಿಜವಲ್ಲ. ಈ ವಿಷಯವನ್ನು ಸುದ್ದಿವಾಹಿನಿಯಲ್ಲಿ ನೋಡಿದ ನಂತರ ನನ್ನ ತಾಯಿ ಆತ್ಮಹತ್ಯೆಗೆ ಯತ್ನಿಸಿದರು. ತಮ್ಮ ಸೋದರನ ಪರವಾಗಿ ಕಾನೂನಾತ್ಮಕ ಹೋರಾಟ ನಡೆಸುತ್ತೇನೆ. ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ವಿಶೇಷ ತನಿಖಾ ತಂಡ ನವೀನ್ ಹೆಸರನ್ನು ಬಳಸಿದ್ದಕ್ಕಾಗಿ ನಮ್ಮ ಕುಟುಂಬದವರು ಆತಂಕಗೊಂಡಿದ್ದಾರೆ ಎಂದು ತಿಮ್ಮೇಗೌಡ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕಡನೂರು ಗ್ರಾಮದ ನವೀನ್ ಕಾಲೇಜು ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟು ರಿಯಲ್ ಎಸ್ಟೇಟ್ ಮತ್ತು ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದಾರೆ. ನವೀನ್ ಕುಟುಂಬ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದೆ.

ಆರು ವರ್ಷಗಳ ಹಿಂದೆ ನವೀನ್ ಗೆ ಮದುವೆಯಾದ ನಂತರ ನವೀನ್ ಮತ್ತು ಆತನ ಪತ್ನಿ ಚಿಕ್ಕಮಗಳೂರಿನ ಬಿರೂರಿಗೆ ಹೋಗಿ ನೆಲೆಸಿದ್ದರು. ಹಿಂದೂಪರ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ನವೀನ್ ಭಾಗವಹಿಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com