ಶಶಿಕಲಾಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡುವಂತೆ ಸೂಚಿಸಿದ್ದು ಸಿಎಂ ಸಿದ್ದರಾಮಯ್ಯ: ಮಾಜಿ ಡಿಜಿಪಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ...
ವಿ.ಕೆ.ಶಶಿಕಲಾ, ಮಾಜಿ ಡಿಜಿಪಿ ಸತ್ಯನಾರಾಯಣ ರಾವ್
ವಿ.ಕೆ.ಶಶಿಕಲಾ, ಮಾಜಿ ಡಿಜಿಪಿ ಸತ್ಯನಾರಾಯಣ ರಾವ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಶಿಕಲಾ ಅವರಿಗೆ ಕಾಟ್, ಬೆಡ್, ತಲೆದಿಂಬು ಇತ್ಯಾದಿ ಸೌಲಭ್ಯಗಳನ್ನು ಒದಗಿಸಿದ್ದೆ ಎಂದು ಮಾಜಿ ಪೊಲೀಸ್ ಮಹಾ ನಿರ್ದೇಶಕ ಹೆಚ್.ಎನ್.ಸತ್ಯನಾರಾಯಣ ರಾವ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.

ಅಕ್ರಮ ಆಸ್ತಿ ಗಳಿಗೆ ಕೇಸಿನಲ್ಲಿ ತಮಿಳುನಾಡಿನ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ,ಶಶಿಕಲಾ ಅವರಿಗೆ ಜೈಲು ಶಿಕ್ಷೆಯಾಗಿದ್ದು ಬೆಂಗಳೂರಿನ ಪರಪ್ಪನ ಕೇಂದ್ರ ಕಾರಾಗೃಹದಲ್ಲಿ ಕೈದಿಯಾಗಿದ್ದಾರೆ. ಶಶಿಕಲಾ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂದು ಆಗಿನ ಡಿಐಜಿ(ಕಾರಾಗೃಹ) ಡಿ.ರೂಪಾ ಆರೋಪಿಸಿ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು.

ಶಶಿಕಲಾಗೆ ಜೈಲಿನಲ್ಲಿ ಸೌಲಭ್ಯ ನೀಡಲು 2 ಕೋಟಿ ರೂಪಾಯಿ ಲಂಚ ಪಡೆಯಲಾಗಿದೆ ಇದರಲ್ಲಿ ಸತ್ಯನಾರಾಯಣ ರಾವ್ ಅವರ ಪಾತ್ರವಿದೆ ಎಂದು ರೂಪಾ ಆರೋಪಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಆರೋಪದ ಬಗ್ಗೆ ತನಿಖೆ ನಡೆಸಲು ಐಎಎಸ್ ಅಧಿಕಾರಿ ವಿಜಯ್ ಕುಮಾರ್ ನೇತೃತ್ವದಲ್ಲಿ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಿತ್ತು.

ಕಳೆದ ವರ್ಷ ಜನವರಿ 25ರಂದು ಸತ್ಯನಾರಾಯಣ ರಾವ್ ಸಮಿತಿಗೆ ನೀಡಿರುವ ಹೇಳಿಕೆಯ ಪ್ರತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದ್ದು,ಶಶಿಕಲಾ ವಿಶೇಷ ನ್ಯಾಯಾಲಯದ ಮುಂದೆ ಶರಣಾಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾದ ಸಂದರ್ಭದಲ್ಲಿ ಅವರ ಪರ ವಕೀಲರು ಜೈಲಿನಲ್ಲಿ ಶಶಿಕಲಾಗೆ ಒಂದನೇ ದರ್ಜೆಯ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದರು. ಜೈಲಿನ ಅಧಿಕಾರಿಗಳಿಗೆ ಮನವಿಯನ್ನು ಪರಿಗಣಿಸುವಂತೆ ನ್ಯಾಯಾಲಯ ಕೂಡ ಹೇಳಿತ್ತು. ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ನನ್ನನ್ನು ಸಂಪರ್ಕಿಸಿ ನನ್ನ ಸಲಹೆ ಕೇಳಿದರು. ಕರ್ನಾಟಕ ಜೈಲು ಕೈಪಿಡಿ ಸಂಖ್ಯೆ 459 ಪ್ರಕಾರ ಇಂತಹ ಸೌಲಭ್ಯಗಳನ್ನು ಯಾವೊಬ್ಬ ಕೈದಿಗೂ ನೀಡುವಂತಿಲ್ಲ ಎಂದು ನಾನು ಹೇಳಿದ್ದೆ. ಈ ಬಗ್ಗೆ ಮೆಮೊ ಕೂಡ ಹೊರಡಿಸಿದ್ದೆ ಎಂದು ಸತ್ಯನಾರಾಯಣ ರಾವ್ ಹೇಳಿದ್ದಾರೆ.

ಹೀಗಾಗಿ ಆರಂಭದಲ್ಲಿ ಶಶಿಕಲಾಗೆ ವಿಶೇಷ ಸೌಲಭ್ಯವನ್ನು ಪರಪ್ಪನ ಕಾರಾಗೃಹದಲ್ಲಿ ನೀಡಿರಲಿಲ್ಲ. ಮಹಿಳಾ ಕೊಠಡಿಯ ಮೊದಲನೇ ಮಹಡಿಯಲ್ಲಿ ಸಿಂಗಲ್ ಕೊಠಡಿಯಲ್ಲಿ ಶಶಿಕಲಾ ಅವರನ್ನು ಇರಿಸಲಾಗಿತ್ತು ಎಂದು ಹೇಳಿದ್ದಾರೆ.

ಶಶಿಕಲಾ ಜೈಲು ಸೇರಿ ಒಂದು ತಿಂಗಳು ಕಳೆದ ನಂತರ, ಸಿಎಂ ಸಿದ್ದರಾಮಯ್ಯನವರು ತಮ್ಮ ಖಾಸಗಿ ಸಹಾಯಕ ಪಿಎ ವೆಂಕಟೇಶ್ ಮೂಲಕ ನನ್ನನ್ನು ಕರ್ನಾಟಕ ವಿದ್ಯುತ್ ನಿಗಮ ಅತಿಥಿ ಗೃಹಕ್ಕೆ ಕರೆದು ಶಶಿಕಲಾಗೆ ಯಾವ ರೀತಿಯ ಸೌಲಭ್ಯ ನೀಡಲಾಗುತ್ತಿದೆ ಎಂದು ಕೇಳಿದರು.
ಅವರಿಗೆ ವಿಶೇಷ ಸೌಲಭ್ಯಗಳೇನು ನೀಡುತ್ತಿಲ್ಲ, ಬೇರೆ ಮಹಿಳಾ ಕೈದಿಗಳಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದೆ. ಅದಕ್ಕೆ ಸಿಎಂ ಸಿದ್ದರಾಮಯ್ಯನವರು ಶಶಿಕಲಾಗೆ ಜೈಲಿನಲ್ಲಿ ಕಾಟ್, ಬೆಡ್, ತಲೆದಿಂಬು ನೀಡುವಂತೆ ಹೇಳಿದರು. ಅವರ ಸೂಚನೆ ಪ್ರಕಾರ ನಾನು ನಡೆದುಕೊಂಡೆಯಷ್ಟೆ. ಸರ್ಕಾರಕ್ಕೆ ಈ ವಿಷಯದಲ್ಲಿ ಅಧಿಕಾರವಿದೆ. ಕಾಟ್, ಬೆಡ್ ಬಿಟ್ಟು ಬೇರೇನನ್ನೂ ನೀಡದಂತೆಯೂ ಮುಖ್ಯಮಂತ್ರಿಯವರು ನನಗೆ ಹೇಳಿದ್ದರು. ಅದಕ್ಕೆ ನಾನು ಕೂಡ ಒಪ್ಪಿಕೊಂಡೆ ಎಂದು ರಾವ್ ತಿಳಿಸಿದ್ದಾರೆ.

ಜೈಲಿನ ಮೊದಲ ಮಹಡಿಯಲ್ಲಿ ಶಶಿಕಲಾ ಮತ್ತು ಇಳವರಸಿಗೆ ಪ್ರತ್ಯೇಕ ಕೊಠಡಿ ನೀಡಲಾಗಿತ್ತಾದರೂ ಪಕ್ಕದ ಕೋಣೆಯನ್ನು ಯಾರಿಗೂ ಕೊಟ್ಟಿರಲಿಲ್ಲ. ಇಡೀ ಮಹಡಿಯನ್ನು ಭದ್ರತೆ ದೃಷ್ಟಿಯಿಂದ ಸುತ್ತುವರಿಯಲಾಗಿತ್ತು ಎಂದು ಹೇಳಿದ್ದಾರೆ.

ಸತ್ಯನಾರಾಯಣ ರಾವ್ ಹೈಕೋರ್ಟ್ ಗೆ ಮೊರೆ: ಶಶಕಲಾಗೆ ವಿಶೇಷ ಸೌಲಭ್ಯ ನೀಡಲು 2 ಕೋಟಿ ರೂಪಾಯಿ ಲಂಚ ನೀಡಲಾಗಿದ್ದು ತಮ್ಮ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕೇಸು ದಾಖಲಿಸುವಂತೆ ಭ್ರಷ್ಟಾಚಾರ ವಿರೋಧಿ ವಿಭಾಗಕ್ಕೆ ಕಳೆದ ಫೆಬ್ರವರಿ 26ರಂದು ರಾಜ್ಯ ಸರ್ಕಾರ ಆದೇಶ ನೀಡಿರುವುದರ ವಿರುದ್ಧ ಸತ್ಯನಾರಾಯಣ ರಾವ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ವಿಚಾರಣೆ ವೇಳೆ  ರಾವ್ ಪರ ವಕೀಲ ಪುತ್ತಿಗೆ ರಮೇಶ್ ವಿಚಾರಣಾ ಸಮಿತಿ ಮುಂದೆ ಸತ್ಯನಾರಾಯಣ ರಾವ್ ಅವರ ಹೇಳಿಕೆಯನ್ನು ಓದಿದರು. ವಿಚಾರಣಾ ಸಮಿತಿ ಸಲ್ಲಿಸಿದ್ದ ವರದಿಯ ಪ್ರತಿಯನ್ನು ಸರ್ಕಾರ ಒದಗಿಸಿಲ್ಲ ಎಂದು ವಕೀಲರು ಹೇಳಿದರು.

ಭ್ರಷ್ಟಾಚಾರ ನಿಗ್ರಹ ಸಂಸ್ಥೆ(ಎಸಿಬಿ) ಸತ್ಯನಾರಾಯಣ ರಾವ್ ಅವರನ್ನು ಬಂಧಿಸುವ ಸಾಧ್ಯತೆಯಿರುವುದರಿಂದ ಈ ವಿಷಯದಲ್ಲಿ ಅವಸರ ಮಾಡದಂತೆ ಎಸಿಬಿಗೆ ಆದೇಶಿಸಲು ನಾನು ಕೋರ್ಟ್ ಮೊರೆ ಹೋಗಿದ್ದೇನೆ ಎಂದು ವಕೀಲರು ತಿಳಿಸಿದರು. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 13(1ಅಂಡ್ ಸಿ) ಮತ್ತು 13(2)ರಡಿ ಕೇಸು ದಾಖಲಾಗಿದೆ, ಆದರೆ  ಸೆಕ್ಷನ್ 13(2) ಅನ್ವಯವಾಗುವುದಿಲ್ಲ ಎಂದರು.

ವಿಚಾರಣಾ ಸಮಿತಿ ಸಲ್ಲಿಸಿದ್ದ ವರದಿಯ ಪ್ರತಿ ನೀಡುವಂತೆ  ಮತ್ತು ಎಫ್ಐಆರ್ ಪ್ರತಿ ನೀಡುವಂತೆ ನ್ಯಾಯಮೂರ್ತಿ ವಿನೀತ್ ಕೊತಾರಿ ರಾವ್ ಪರ ವಕೀಲರಿಗೆ ಕೇಳಿ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದರು. ತಮ್ಮ ಆರೋಪಕ್ಕೆ ಸೂಕ್ತವಾಗಿ ಮಾಜಿ ಡಿಐಜಿ (ಕೈದಿ ವಿಭಾಗ) ಡಿ.ರೂಪಾ ಸೂಕ್ತ ಮಾಹಿತಿ ಒದಗಿಸಿಲ್ಲ ಎಂದು ರಾವ್ ಪರ ವಕೀಲರು ವಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com