ವಿದ್ವತ್ ಡಿಸ್ ಚಾರ್ಜ್ ಬಗ್ಗೆ ಹೈಕೋರ್ಟ್ ಸಂಶಯ: ಮಾಧ್ಯಮಗಳ ವಿರುದ್ಧ ವಕೀಲರ ಆಕ್ಷೇಪ

ವಿದ್ವತ್ ಲೋಕನಾಥನ್ ಡಿಸ್ ಚಾರ್ಜ್ ಗೆ ಸಂಬಂಧಿಸಿದಂತೆ ಶಾಸಕ ಎನ್.ಎ ಹ್ಯಾರಿಸ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ವಿಷಯಕ್ಕೆ .,..
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Updated on
ಬೆಂಗಳೂರು: ವಿದ್ವತ್ ಲೋಕನಾಥನ್ ಡಿಸ್ ಚಾರ್ಜ್ ಗೆ ಸಂಬಂಧಿಸಿದಂತೆ ಶಾಸಕ ಎನ್.ಎ ಹ್ಯಾರಿಸ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಸಾರ್ವಜನಿಕ ಅಭಿಯೋಜಕ ಶ್ಯಾಮಸುಂದರ್ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಜಾಮೀನು ಕೋರಿ ನಲಪಾಡ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಹಿರಿಯ ವಕೀಲ ಸಿ.ವಿ.ನಾಗೇಶ್‌ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ಮಂಡಿಸಿದ ವಾದ ಸರಣಿಯಿದು.
ವಿದ್ವತ್‌ಗೆ ದೇಹದ ಮೇಲೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಎಲ್ಲೊ ಒಂದು ಕೂದಲೆಳೆಯಷ್ಟು ಮೂಳೆ ಮುರಿದಿದೆ. ಫರ್ಜಿ ಕೆಫೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದೇ ಇಲ್ಲ. ಮಾಧ್ಯಮಗಳು ಅದರಲ್ಲೂ ಟಿ.ವಿ.ಚಾನೆಲ್‌ಗಳು ಈ ವಿಷಯವನ್ನೇ ದೊಡ್ಡದು ಮಾಡಿ ತೋರಿಸುತ್ತಿವೆ ಎಂದು ಆಕ್ಷೇಪಿಸಿದರು.
ವಿದ್ವತ್‌ಗೆ ಏನೂ ಆಗಿಲ್ಲ. ಆತ ಬೇಕಂತಲೇ ಆಸ್ಪತ್ರೆಯಲ್ಲಿ ಸುಖಾಸುಮ್ಮನೇ ಚಿಕಿತ್ಸೆ ಪಡೆಯುತ್ತಾ ಒಳರೋಗಿಯಾಗಿದ್ದಾನೆ. ಮನೆಗೆ ಹೋಗು ಎಂದರೆ ಒಂದಲ್ಲಾ ಒಂದು ನೆಪ ಹೇಳಿ ಹಾಸಿಗೆಗೆ ಅಂಟಿಕೊಂಡಿದ್ದಾನೆ. ಈತನ ಮೇಲೆ ಮೊಹಮದ್‌ ನಲಪಾಡ್‌ ಹ್ಯಾರಿಸ್‌ ಹಲ್ಲೆ ನಡೆಸಿಲ್ಲ. ಬೇಕಾದರೆ ವಿದ್ವತ್‌ ಆರೋಗ್ಯದ ಬಗ್ಗೆ ಮಲ್ಯ ಆಸ್ಪತ್ರೆ ವೈದ್ಯರು ಕೊಟ್ಟಿರುವ ವರದಿಯನ್ನೇ ನೋಡಿದರೆ ಸಾಕು. ಎಲ್ಲವೂ ಸ್ಪಷ್ಟವಾಗುತ್ತದೆ.
ದೂರು ದಾಖಲಾದ ನಂತರ ನಲಪಾಡ್‌ ಸ್ವತಃ ಪೊಲೀಸರಿಗೆ ಶರಣಾಗಿದ್ದಾರೆ. ಅವರು ವಿದ್ವತ್‌ ಮೇಲೆ ಹಲ್ಲೆ ಮಾಡುವ ಯಾವುದೇ ಉದ್ದೇಶ ಹೊಂದಿರಲಿಲ್ಲ. ಪೂರ್ವ ತಯಾರಿಯೂ ಅವರಿಗಿರಲಿಲ್ಲ. ಅಷ್ಟೇಕೆ, ಅವರು ಹಲ್ಲೆ ಪ್ರಯತ್ನವನ್ನೇ ಮಾಡಿಲ್ಲ. ಹಾಗಾಗಿ ಜಾಮೀನು ನೀಡಬೇಕು ಎಂದು ಕೋರಿದರು.
ದೂರುದಾರರು ಹೇಳಿದಂತೆ ಆರೋಪಿಗಳು ಯಾವುದೇ ಬಾಟಲಿ ಅಥವಾ ಮಾರಣಾಂತಿಕ ಆಯುಧ ಬಳಸಿಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಒಡೆಯದ ಬಾಟಲಿಗಳನ್ನೂ ಮಾರಕ ಆಯುಧವಾಗಿ ಪ್ರಯೋಗಿಸಬಹುದಲ್ಲವೇ‘ ಎಂದು ಪ್ರಶ್ನಿಸಿದರು.
ನಾಗೇಶ್‌ ವಾದ ಸರಣಿಯನ್ನು ಬಲವಾಗಿ ಆಕ್ಷೇಪಿಸಿದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಎಂ.ಎಸ್‌.ಶ್ಯಾಮಸುಂದರ್, ‘ತನಿಖಾಧಿಕಾರಿಗಳು ವೈದ್ಯರ ವರದಿ ನೀಡುವಂತೆ ಹಲವು ಬಾರಿ ಕೇಳಿದ್ದರೂ ಕೊಟ್ಟಿಲ್ಲ. ವಾಸ್ತವದಲ್ಲಿ ಇದೊಂದು ಗೋಪ್ಯ ವರದಿ. ಇದನ್ನು ರೋಗಿ ಹೊರತುಪಡಿಸಿ ಬೇರಾರಿಗೂ ಕೊಡುವಂತಿಲ್ಲ. ಆದರೆ, ಇದು ವಕೀಲರ ಕೈಗೆ ಹೇಗೆ ದೊರೆಯಿತೊ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ವರದಿ ನೀಡಿರುವ ಡಾ.ಆನಂದ್‌ಗೆ ತನಿಖಾಧಿಕಾರಿ ನೋಟಿಸ್‌ ನೀಡಿದ್ದಾರೆ. ವೈದ್ಯಕೀಯ ಮಂಡಳಿಯಿಂದಲೂ ವಿವರಣೆ ಕೋರಲಾಗಿದೆ’ ಎಂದು ತಿಳಿಸಿದ ಶ್ಯಾಮಸುಂದರ್‌, ದೃಶ್ಯಾವಳಿಯ ವಿಡಿಯೊ ದಾಖಲೆಗಳನ್ನು ನ್ಯಾಯಪೀಠಕ್ಕೆ ಒಪ್ಪಿಸಿದರು. ವಿಚಾರಣೆಯನ್ನು ಇದೇ 12ಕ್ಕೆ ಮುಂದೂಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com