ವಿದ್ವತ್ ಮೇಲೆ ಮೊದಲು ಹಲ್ಲೆ ನಡೆಸಿದ್ದು ನಲಪಾಡ್ ಎಂಬುದು ಸಿಸಿಟಿವಿಯಲ್ಲಿ ದಾಖಲು: ಹೈಕೋರ್ಟ್

ಫೆಬ್ರವರಿ 17 ರಂದು ಫರ್ಜಿಕೆಫೆಯಲ್ಲಿ ವಿದ್ವತ್ ಲೋಗನಾಥನ್ ಮೇಲೆ ಮೊದಲು ಹಲ್ಲೆ ಮಾಡಿದ್ದು ಮೊಹಮದ್ ನಲಪಾಡ್ ಎಂಬುದು ಸಿಸಿಟಿವಿಯಲ್ಲಿ ದಾಖಲಾಗಿದೆ ...
ವಿದ್ವತ್ ಮತ್ತು ಮೊಹಮದ್ ನಲಪಾಡ್
ವಿದ್ವತ್ ಮತ್ತು ಮೊಹಮದ್ ನಲಪಾಡ್
ಬೆಂಗಳೂರು: ಫೆಬ್ರವರಿ 17 ರಂದು ಫರ್ಜಿಕೆಫೆಯಲ್ಲಿ ವಿದ್ವತ್ ಲೋಗನಾಥನ್ ಮೇಲೆ ಮೊದಲು ಹಲ್ಲೆ ಮಾಡಿದ್ದು ಮೊಹಮದ್ ನಲಪಾಡ್ ಎಂಬುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ.
ಮೊಹಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ವೇಳೆ  ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಬಹಿರಂಗ ಪಡಿಸಿದ್ದಾರೆ, ಕೆಫೆಯಲ್ಲಿ ಮೊಹಮದ್ ನಲಪಾಡ್ ವಿದ್ವತ್ ಮೇಲೆ ಮೊದಲು ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ, ಇದನ್ನು ನ್ಯಾಯಾಲಯಕ್ಕೆ ತನಿಖಾಧಿಕಾರಿ ನೀಡಿದ್ದಾರೆ, ಹೀಗಾಗಿ ಜಾಮೀನು ಅರ್ಜಿ  ಆದೇಶವನ್ನು ಬುಧವಾರ ಮಧ್ಯಾಹ್ನ 2.30ರ ವೇಳೆಗೆ ನಿಗದಿ ಪಡಿಸಲಾಗಿದೆ.
ಇನ್ನೂ ನಲಪಾಡ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ ನಾಗೇಶ್, ವಿಚಾರಣೆ ವೇಳೆ ನಲಪಾಡ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮುಂದುವರಿಸಿ, ‘ವಿದ್ವತ್‌ ಮೇಲೆ ನಕ್ಕಲ್‌ ರಿಂಗ್‌ನಿಂದ ಆರೋಪಿಗಳ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು. ಇದೊಂದು ಕುಡಿದ ಮತ್ತಿನಲ್ಲಿ ಬಾರ್ ಅಂಡ್‌ ರೆಸ್ಟೊರೆಂಟ್‌ನಲ್ಲಿ ನಡೆದಿರುವ ಸಣ್ಣ ಗಲಾಟೆ’ ಎಂದು ಪ್ರತಿಪಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ನಲಪಾಡ್‌ ವಿದ್ವತ್‌ಗೆ ಹೊಡೆದಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣ್ತಿದೆಯಲ್ರೀ. ಆದರೂ ನೀವು ಹೊಡೆದಿಲ್ಲ ಎನ್ನುತ್ತಿದ್ದೀರಿ’ ಎಂದು ನಾಗೇಶ್‌ ಅವರನ್ನು ಪ್ರಶ್ನಿಸಿದರು.
ಇದಕ್ಕೆ ನಾಗೇಶ್ ‘ಸ್ವಾಮಿ ನಾನು ಆ ವಿಡಿಯೊ ನೋಡೇ ಇಲ್ಲ. ದೂರು ಮತ್ತು ಪ್ರತ್ಯಕ್ಷದರ್ಶಿಯ ಅನುಸಾರ ಗಲಾಟೆಯ ವೇಳೆ ಜಗ್‌ ಹಾಗೂ ಬಾಟಲಿಗಳನ್ನು ತೂರಲಾಗಿದೆ.ಅಷ್ಟಕ್ಕೂ ವಿಡಿಯೊವನ್ನು ಪ್ರಾಸಿಕ್ಯೂಷನ್‌ ದಾಖಲೆಯಾಗಿ ನೀಡಿಲ್ಲ’ ಎಂದು ಹೇಳಿದರು.
ಪೊಲಿಸರು ಸ್ಥಳ ಮಹಜರು ನಡೆಸಿದ ವೇಳೆ ತಮ್ಮ ಅಮಾನತು ಪಂಚನಾಮೆಯಲ್ಲಿ ಎಲ್ಲವನ್ನೂ ನಮೂದು ಮಾಡಿದ್ದಾರೆ. ಹಲ್ಲೆಗೆ ಬಳಸಿದ ಜಗ್‌ ಮತ್ತು ಬಾಟಲಿ ಚೂರುಗಳನ್ನು ಸಂಗ್ರಹಿಸಿದ್ದಾರೆ. ಆದರೆ, ಇಲ್ಲೆಲ್ಲೂ ನಕ್ಕಲ್‌ ರಿಂಗ್ ಪ್ರಸ್ತಾಪವೇ ಇಲ್ಲ ಎಂದು ಹೇಳಿದರು. ವಿದ್ವತ್‌ ಆರೋಗ್ಯ ಸರಿಯಾಗಿಯೇ ಇದೆ. ವೈದ್ಯರು ನೀಡಿರುವ ದಾಖಲೆಗಳನ್ನು ತಿರುಚಿಲ್ಲ. ಪ್ರಾಸಿಕ್ಯೂಷನ್‌ ತನಿಖೆಯ ದಿಕ್ಕು ತಪ್ಪಿಸುತ್ತಿದೆ’ ಎಂದು ಆರೋಪಿಸಿದರು.
ವಿದ್ವತ್ ಮತ್ತು ನಲಪಾಡ್ ಇಬ್ಬರೂ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರಾದ್ದರಿಂದ ಸಾರ್ವಜನಿಕರ ಗಮನ ಈ ಪ್ರಕರಣದ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ಮಾಧ್ಯಮಗಳು ಇದನ್ನು ಇನ್ನಷ್ಟು ವೈಭವೀಕರಿಸಿವೆ’ ಎಂದು ಆಕ್ಷೇಪಿಸಿದರು.
ಪ್ರಾಸಿಕ್ಯೂಷನ್‌ ಪರ ವಕೀಲ ಎಂ.ಎಸ್.ಶ್ಯಾಮಸುಂದರ್, ‘ವೈದ್ಯಕೀಯ ವರದಿ ನಲಪಾಡ್‌ ತಂದೆಗೆ ಹೇಗೆ ಲಭಿಸಿತು ಎಂಬ ಬಗ್ಗೆ ಅರ್ಜಿದಾರರ ಪರ ವಕೀಲರು ಕೋರ್ಟ್‌ಗೆ ಸರಿಯಾಗಿ ವಿವರಿಸಿಲ್ಲ. ವಿದ್ವತ್‌ ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ವೈದ್ಯಕೀಯ ವರದಿಯನ್ನು ಈತನಕ ತನಿಖಾಧಿಕಾರಿಗೆ ನೀಡಿಲ್ಲ. ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡಬಾರದು’ ಎಂದು ಪುನರುಚ್ಚರಿಸಿದರು.
ನಲಪಾಡ್‌ ತಂದೆ ಪ್ರಭಾವಿ ಎನ್ನುವುದಾದರೆ, ವಿದ್ವತ್‌ ಅವರನ್ನು ಬಿಜೆಪಿ ಮುಖಂಡ ಆರ್. ಅಶೋಕ್, ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ. ಇವರ ಭೇಟಿಯ ನಂತರವೇ ಎಫ್‌ಐಆರ್‌ನಲ್ಲಿ ಭಾರತೀಯ ದಂಡ ಸಂಹಿತೆ ಕಲಂ 307 ಅನ್ನು ಸೇರಿಸಲಾಗಿದೆ’ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com