ಲಿಂಗಾಯತರಿಗೆ ಪ್ರತ್ಯೇಕ ಧಾರ್ಮಿಕ ಸ್ಥಾನಮಾನ ಕುರಿತು ನಿಗಾಡಿ ಗ್ರಾಮಸ್ಥರು ಚರ್ಚಿಸುತ್ತಿರುವುದು
ಲಿಂಗಾಯತರಿಗೆ ಪ್ರತ್ಯೇಕ ಧಾರ್ಮಿಕ ಸ್ಥಾನಮಾನ ಕುರಿತು ನಿಗಾಡಿ ಗ್ರಾಮಸ್ಥರು ಚರ್ಚಿಸುತ್ತಿರುವುದು

ಇಲ್ಲಿನ ಲಿಂಗಾಯತರಿಗೆ ಒಗ್ಗಟ್ಟು ಮತ್ತು ಮೌಲ್ಯಗಳೇ ಮುಖ್ಯ

ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಿ ರಾಜ್ಯ ಸಚಿವ ಸಂಪುಟ ...
Published on

ಧಾರವಾಡ: ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಿ ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿರುವ ತೀರ್ಮಾನ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ.

ಆದರೆ ಲಿಂಗಾಯತರು ಹೆಚ್ಚಾಗಿರುವ ಧಾರವಾಡದಲ್ಲಿ ಲಿಂಗಾಯತ ಸಮುದಾಯದ ಅನೇಕರು ಹೇಳುವ ಪ್ರಕಾರ, ತಾವು ಹಿಂದೂ ಅಥವಾ ವೈದಿಕ ಧರ್ಮದ ಜೊತೆ ಗುರುತಿಸಿಕೊಳ್ಳಲು ಇಚ್ಛಿಸುತ್ತೇವೆಯೇ ಹೊರತು ಪ್ರತ್ಯೇಕ ಧಾರ್ಮಿಕ ಸ್ಥಾನಮಾನದ ಅಗತ್ಯವಿಲ್ಲ ಎನ್ನುತ್ತಾರೆ.

ಧಾರವಾಡ ಮತ್ತು ಬೆಳಗಾವಿಯ ಕೆಲ ಗ್ರಾಮಗಳಿಗೆ ಭೇಟಿ ನೀಡಿದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರ ಅವರಲ್ಲಿ ಅಭಿಪ್ರಾಯ ಕೇಳಿದಾಗ ಲಿಂಗಾಯತ ಸಮುದಾಯದವರು ಶಾಂತಿ, ಸೌಹಾರ್ದತೆಯಿಂದ ಬದುಕುತ್ತಿದ್ದು ಅದನ್ನು ಒಡೆಯುವುದು ಒಳ್ಳೆಯದಲ್ಲ. ಈ ಗ್ರಾಮದಲ್ಲಿ ವೀರಶೈವ ಮತ್ತು ಲಿಂಗಾಯತರ ಮಧ್ಯೆ ಏಕತೆ, ಒಗ್ಗಟ್ಟು ಇದೆ. ಅದು ಹಾಗೆಯೇ ಮುಂದುವರಿಯುತ್ತದೆ. ಅದನ್ನು ವಿಭಜಿಸುವುದು ಒಳ್ಳೆಯದಲ್ಲ ಎಂದರು. ಇನ್ನು ಕೆಲವರು ತಮಗೆ ಈ ವಿಷಯದ ಬಗ್ಗೆ ಗೊತ್ತೇ ಇಲ್ಲ ಎಂದರು.

ಶತಮಾನಗಳಿಂದ ನಾವಿಲ್ಲಿ ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದೇವೆ, ಅದನ್ನು ವಿಭಜಿಸುವ ಅಗತ್ಯವಿಲ್ಲ. ಇದರಿಂದ ರಾಜಕೀಯ ಪಕ್ಷಗಳಿಗೆ ಏನು ಸಿಗುತ್ತದೆ, ಏನು ಲಾಭವಿಟ್ಟುಕೊಂಡು ಹೀಗೆ ಮಾಡಿದ್ದಾರೆ ಎಂದು ಗೊತ್ತಾಗುವುದಿಲ್ಲ. ಆದರೆ ಹಿಂದೂ ಧರ್ಮೀಯರು ಎಂಬ ಹಣೆಪಟ್ಟಿಯನ್ನು ಬಿಡಲು ಈ ಸಮುದಾಯದ ಜನರು ಸಿದ್ದರಿಲ್ಲ. ಹಲವಾರು ವರ್ಷಗಳಿಂದ ನಾವು ಹಿಂದೂ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದಿದ್ದೇವೆ. ನಮ್ಮ ಪೂರ್ವಜರು ಏನು ಮಾಡುತ್ತಿದ್ದರೋ ಅದನ್ನು ನಾವಿಂದು ಅನುಸರಿಸಿಕೊಂಡು ಹೋಗುತ್ತಿದ್ದೇವೆ, ಅದರಲ್ಲಿ ತಪ್ಪೇನು ಇಲ್ಲ ಎಂದು ಬೇಲೂರಿನ ಗ್ರಾಮಸ್ಥರೊಬ್ಬರು ಹೇಳುತ್ತಾರೆ.

ತಮಗೆ ಪ್ರತ್ಯೇಕ ಧಾರ್ಮಿಕ ಸ್ಥಾನಮಾನ ನೀಡಬೇಕೆಂದು ಜನರ ಬೇಡಿಕೆ ಈಡೇರಿದ್ದು ಸರ್ಕಾರದ ಮೇಲೆ ಕೆಲ ಪರಿಣಾಮ ಬೀರಬಹುದು ಎನ್ನುತ್ತಾರೆ ಕೆಲ ಗ್ರಾಮಸ್ಥರು. ನಾವು ಇದರ ವಿರುದ್ಧ ಪ್ರತಿಭಟನೆ ಕೂಡ ಮಾಡಿದ್ದೇವೆ. ಆದರೆ ಒಂದೇ ಸಮುದಾಯದ ಜನರನ್ನು ಹೀಗೆ ಇಬ್ಭಾಗ ಮಾಡುತ್ತಾರೆ ಎಂದು ನಮಗೆ ಗೊತ್ತಿರಲಿಲ್ಲ. ಶತಮಾನಗಳಿಂದ ಲಿಂಗಾಯತ ಮತ್ತು ವೀರಶೈವ ಧರ್ಮ ಒಂದಕ್ಕೊಂದು ಬೆಸೆದುಕೊಂಡಿದೆ. ನಮ್ಮನ್ನು ಪ್ರತ್ಯೇಕ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಮತ್ತೊಬ್ಬ ಗ್ರಾಮಸ್ಥರು.

ಲಿಂಗಾಯತ ಒಂದು ಪ್ರತ್ಯೇಕ ಧರ್ಮ ಎಂದು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೀಡಿರುವ ವರದಿ ಪ್ರಕಾರ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ''ತಾವು ವೈದಿಕ ಧರ್ಮದ ಭಾಗವಾಗಿದ್ದೇವೆಯೇ ಎಂಬ ಬಗ್ಗೆ ಲಿಂಗಾಯತರಲ್ಲಿ ಅರಿವು ಇಲ್ಲ. ಮಠಗಳು ಜನರಲ್ಲಿ ಅರಿವು ಮೂಡಿಸಬೇಕಿದೆ. ಇತಿಹಾಸದ ದಾಖಲೆಗಳ ಪ್ರಕಾರ, ಲಿಂಗಾಯತ ಹಿಂದೂ ಅಥವಾ ವೈದಿಕ ಧರ್ಮಗಳ ಭಾಗವಲ್ಲ. 12ನೇ ಶತಮಾನದಲ್ಲಿ ಶರಣ ಚಳವಳಿ ನಂತರ ಮತ್ತು ಬಸವಣ್ಣನವರ ಮರಣ ನಂತರ ಚಳವಳಿ ನಿಷ್ಕ್ರಿಯವಾಯಿತು. ಆಗ ಇದ್ದ ಜನರು ಹಿಂದೂ ಧರ್ಮವನ್ನೇ ಪಾಲಿಸಲು ಆರಂಭಿಸಿದರು''ಎನ್ನುತ್ತಾರೆ ನಾಗಮೋಹನ್ ದಾಸ್ ಸಮಿತಿಯ ಸದಸ್ಯ ಸರ್ಜು ಕಟ್ಕರ್.
ಎಸ್/ಸಿಗಳಿಗೆ ಮೀಸಲಾತಿ ಕೊರತೆ:ಪ್ರತ್ಯೇಕ ಧಾರ್ಮಿಕ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡರೆ ವೀರಶೈವ ಮತ್ತು ಲಿಂಗಾಯತ ಗುಂಪಿನ ಪರಿಶಿಷ್ಟ ಜಾತಿಯವರು ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎನ್ನುತ್ತಾರೆ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್.

ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು ಅದಕ್ಕೇ ತಿರುಗುಬಾಣವಾಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com