ಲಿಂಗಾಯತರು ವೀರಶೈವ ಮಹಾಸಭಾವನ್ನು ಬಹಿಷ್ಕರಿಸಬೇಕು: ಜಾಗತಿಕ ಲಿಂಗಾಯತ ಸಮುದಾಯ

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ವೀರಶೈವ ಮಹಾಸಭಾ ತೆಗೆದುಕೊಂಡಿರುವ ನಿರ್ಣಯಗಳು ಹಾದಿತಪ್ಪಿ...
ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್
ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ವೀರಶೈವ ಮಹಾಸಭಾ ತೆಗೆದುಕೊಂಡಿರುವ ನಿರ್ಣಯಗಳು ಹಾದಿತಪ್ಪಿಸುವಂತಿದ್ದು, ಈ ನಿರ್ಣಯಗಳನ್ನು ಅಖಿಲ ಭಾರತ ವೀರಶೈವ ಮಹಾಸಭಾ ಹಿಂಪಡೆಯಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹಿಸಿದೆ.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಧಿಸೂಚನೆ ಹೊರಬಿದ್ದ ಮೇಲೆ ಲಿಂಗಾಯತಕ್ಕೂ, ವೀರಶೈವಕ್ಕೂ ಯಾವುದೇ ಸಂಬಂಧ ಇಲ್ಲ. ವೀರಶೈವ ಮಹಾಸಭಾ ಲಿಂಗಾಯತರಿಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರ ಹೊಂದಿಲ್ಲ, ಹೀಗಾಗಿ ಈ ಎರಡು ಸಮುದಾಯಗಳನ್ನು ಪ್ರತ್ಯೇಕಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್ ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವೀರಶೈವ ಮಹಾಸಭಾ ತೆಗೆದುಕೊಂಡಿರುವ ನಿರ್ಣಯಗಳು ಲಿಂಗಾಯತ ಪ್ರತ್ಯೇತ ಧರ್ಮ ಶಿಫಾರಸ್ಸಿಗೆ ವಿರುದ್ಧವಾಗಿವೆ. ಹಾಗಾಗಿ ವೀರಶೈವ ಮಹಾಸಭಾದಲ್ಲಿರುವ ಲಿಂಗಾಯತ ಪ್ರತಿನಿಧಿಗಳು ರಾಜೀನಾಮೆ ನೀಡಿ ಹೊರ ಬರಬೇಕು ಎಂದು ಅವರು ಒತ್ತಾಯಿಸಿದರು.

ಲಿಂಗಾಯತ ಹಾಗೂ ವೀರಶೈವ ಎರಡೂ ಬೇರೆ ಬೇರೆ. ಎರಡೂ ಒಂದೇ ಎಂಬ ವಾದ ಸರಿಯಲ್ಲ. ಪಂಚಾಚಾರ್ಯರು ಈ ಹಿಂದೆ ಬೇಡುವ ಜಂಗಮ ಪ್ರಮಾಣ ಪತ್ರ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದರು. ಈಗಲಾದರೂ ಪಂಚಾಚಾರ್ಯರು ಅವರು ವೀರಶೈವರು, ಲಿಂಗಾಯತರೋ, ಹಿಂದೂಗಳೋ, ದಲಿತರೋ, ಶೂದ್ರರೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.

ವೀರಶೈವರು ಬಸವತತ್ವಗಳನ್ನು ಒಪ್ಪಿ ಬರುವುದಾದರೆ ಅದಕ್ಕೆ ಅಡ್ಡಿಯಿಲ್ಲ ಎಂದು ತಜ್ಞರ ಸಮಿತಿ ಹೇಳಿದೆ. ಆದರೆ ವೀರಶೈವ ಮಹಾಸಭಾದಲ್ಲಿ ನಿನ್ನೆ ತೆಗೆದುಕೊಂಡ ನಿರ್ಣಯದಲ್ಲಿ ಬಸವ ತತ್ವಗಳನ್ನು ಬಲವಂತವಾಗಿ ವೀರಶೈವರ ಮೇಲೆ ಹೇರಬಾರದು ಎಂದಿದೆ. ಈ ನಿರ್ಣಯವೇ ಅವರು ಬಸವಣ್ಣನವರನ್ನು ಒಪ್ಪಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಆರೋಪಿಸಿದರು.
ವೀರಶೈವ ಮಹಾಸಭಾ ಲಿಂಗಾಯತ ಸಮುದಾಯವನ್ನು ಮತ್ತು ಅದರ ತತ್ವ, ಆದರ್ಶಗಳನ್ನು ಪ್ರತಿನಿಧಿಸುವುದಿಲ್ಲ. ಹೀಗಾಗಿ ಮಹಾಸಭಾದ ಲಿಂಗಾಯತರು ರಾಜೀನಾಮೆ ನೀಡಿ ಹೊರಬರಬೇಕು ಇಲ್ಲವೇ ಲಿಂಗಾಯತ ಸಮುದಾಯಕ್ಕೆ ನೀಡಿರುವ ಅಲ್ಪಸಂಖ್ಯಾತ ಸಮುದಾಯದ ಸ್ಥಾನಮಾನವನ್ನು ವಿರೋಧಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಾವೆಲ್ಲರೂ ಭಾರತೀಯರು ಮತ್ತೆ ಕನ್ನಡಿಗರು ಮತ್ತು ನಂತರ ಲಿಂಗಾಯತರು ಎಂಬ ವಿಷಯ ಬರುತ್ತದೆ ಎಂದು ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಾಮದಾರ್,ಹಿಂದೂಗಳು ಆಚರಿಸುವ ಪದ್ಧತಿ, ಕ್ರಮಗಳನ್ನೇ ವೀರಶೈವರು ಅನುಸರಿಸುತ್ತಾರೆ. ದೇವಸ್ಥಾನಗಳಿಗೆ ಹೋಗುತ್ತಾರೆ, ಹೋಮ, ಹವನಗಳನ್ನು ಮಾಡುತ್ತಾರೆ, ಜ್ಯೋತಿಷ್ಯದಲ್ಲಿ ನಂಬಿಕೆಯಿದೆ. ಇವುಗಳನ್ನೆಲ್ಲ ಲಿಂಗಾಯತರು ಪಾಲಿಸುವುದಿಲ್ಲ, ಹೀಗಾಗಿ ಇವರಿಗೆ ಪ್ರತ್ಯೇಕ ಧರ್ಮಕ್ಕೆ ಒತ್ತಾಯಿಸುವ ಹಕ್ಕು ಇದೆ. ಹೀಗಾಗಿ ಸಂಪ್ರದಾಯ, ಆಚಾರ ವಿಚಾರಗಳ ವಿಷಯ ಬಂದಾಗ ಲಿಂಗಾಯತರು ಮತ್ತು ವೀರಶೈವರು ಯಾವತ್ತಿಗೂ ಭಿನ್ನ. ಇದೀಗ ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ ನೀಡಿದೆ. ಎರಡು ಧರ್ಮವನ್ನು ವಿಭಜಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೂ ಬಸವಣ್ಣನವರ ತತ್ವಗಳನ್ನು ಪಾಲಿಸುವುದರಿಂದ ವೀರಶೈವರು ಲಿಂಗಾಯತರಾಗಬಹುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com