ಸಿಎಂ ಪುತ್ರ ರಾಕೇಶ್ ವಿರುದ್ಧ ಕೇಸು ದಾಖಲಿಸಿದ್ದ ಇನ್ಸ್ ಪೆಕ್ಟರ್ ಗೆ ಸಿಗದ ಮುಕ್ತಿ

ಕಳೆದ 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ತೆಗೆದುಕೊಂಡ ಕಠಿಣ ...
ಮುಖ್ಯಮಂತ್ರಿ ಸಿದ್ದರಾಮಯ್ಯ-ರಾಕೇಶ್ ಸಿದ್ದರಾಮಯ್ಯ(ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ-ರಾಕೇಶ್ ಸಿದ್ದರಾಮಯ್ಯ(ಸಂಗ್ರಹ ಚಿತ್ರ)

ಬೆಂಗಳೂರು: ಕಳೆದ 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ತೆಗೆದುಕೊಂಡ ಕಠಿಣ ಕ್ರಮ ಇದೀಗ ಈ ವರ್ಷ ವಿಧಾನಸಭೆ ಚುನಾವಣೆಗೆ ಮುನ್ನ ಅವರಿಗೇ ಮುಳುವಾಗುವ ಸಾಧ್ಯತೆಯಿದೆ.

2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಿವಂಗತ ಪುತ್ರ ರಾಕೇಶ್ ಸಿದ್ದರಾಮಯ್ಯ ವಿರುದ್ಧ ಭಾರತೀಯ ದಂಡ ಸಂಹಿತೆಯನ್ನು ಸರಿಯಾಗಿ ಹೇರಿಲ್ಲದ್ದರಿಂದ 15 ತಿಂಗಳು ಸೇವೆಯಿಂದ ವಜಾಗೊಂಡಿದ್ದರು.

ಸೇವೆಗೆ ಮರು ಸೇರ್ಪಡೆ ಮಾಡಿಕೊಳ್ಳುವಂತೆ ಪೊಲೀಸ್ ಇನ್ಸ್ ಪೆಕ್ಟರ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಕುತೂಹಲಕಾರಿ ವಿಷಯವೆಂದರೆ ರಾಜ್ಯ ಪೊಲೀಸ್ ಮುಖ್ಯಸ್ಥರ ನೇತೃತ್ವದ ಮೇಲ್ಮನವಿ ಪ್ರಾಧಿಕಾರ 2016ರ ಆರಂಭದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗೆ ನೀಡಿರುವ ಶಿಕ್ಷೆ ಸರಿಯಾಗಿಲ್ಲ, ಕ್ರೂರವಾಗಿದೆ ಎಂದು ವರದಿ ನೀಡಿದ್ದರು.

ಏನಿದು ಪ್ರಕರಣ:
2013ರಲ್ಲಿ ಜಿ.ಎನ್.ಮೋಹನ್ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದರು. ಚುನಾವಣೆಗೆ ಎರಡು ದಿನ ಮೊದಲು ಅಂದರೆ ಮೇ 3, 2013ರಲ್ಲಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಕೇಶ್ ಸಿದ್ದರಾಮಯ್ಯ ಮತ್ತು ಇತರ 10 ಮಂದಿ ವಿರುದ್ಧ ಕೇಸು ದಾಖಲಿಸಿದ್ದರು. ವರುಣಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿರುದ್ಧವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಅಂದಿನ ಕೆಜೆಪಿ ಪಕ್ಷದಿಂದ ಕಾಪು ಸಿದ್ದಲಿಂಗಸ್ವಾಮಿ ಸ್ಪರ್ಧಿಸಿದ್ದರು. ಅವರು ರಾಕೇಶ್ ಸಿದ್ದರಾಮಯ್ಯ ಮತ್ತು ಇಂದಿನ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ 10 ಮಂದಿ ವಿರುದ್ಧ ಮೈಸೂರಿನ ಲಲಿತ ಮಹಲ್ ರಸ್ತೆಯ ಹತ್ತಿರ ಚುನಾವಣಾ ಪ್ರಚಾರ ನಡೆಸುತ್ತಿರುವಾಗ ತಮ್ಮ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದರು ಎಂದು ದೂರು ನೀಡಿದ್ದರು.

ದೂರಿನ ಆಧಾರದಲ್ಲಿ ಇನ್ಸ್ ಪೆಕ್ಟರ್ ಮೋಹನ್ ಸಬ್ ಇನ್ಸ್ ಪೆಕ್ಟರ್ ಗೆ ಭಾರತೀಯ ದಂಡ ಸಂಹಿತೆ 307ರಡಿಯಲ್ಲಿ ಕೇಸು ದಾಖಲಿಸುವಂತೆ ಸೂಚಿಸಿದರು. ಪ್ರಕರಣದಲ್ಲಿ ರಾಕೇಶ್ ಸಿದ್ದರಾಮಯ್ಯನನ್ನು ಮುಖ್ಯ ಆರೋಪಿಯನ್ನಾಗಿ ಹೆಸರಿಸಲಾಯಿತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ ಐದೇ ದಿನಗಳಲ್ಲಿ ಇನ್ಸ್ ಪೆಕ್ಟರ್ ಮೋಹನ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಯಿತು. ಮೇ 18,2013ರಲ್ಲಿ ಮೋಹನ್ ವಿರುದ್ಧ ಕರ್ತವ್ಯಲೋಪ ಮತ್ತು ಅನುಚಿತ ವರ್ತನೆ ಎಂದು ಆರೋಪಿಸಿ ಇಲಾಖಾ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತು. ನಂತರ ಅವರ ಅಮಾನತನ್ನು ಹಿಂತೆಗೆದುಕೊಂಡಿದ್ದು 2014ರ ಆಗಸ್ಟ್ 21ರಂದು 15 ತಿಂಗಳು ಕಳೆದ ಮೇಲೆ, ನಂತರ ಕಾರವಾರ ಜಿಲ್ಲೆಯ ಕ್ರೈಮ್ ರೆಕಾರ್ಡ್ಸ್ ಶಾಖೆಗೆ ವರ್ಗಾಯಿಸಲಾಯಿತು.

2016ರ ಏಪ್ರಿಲ್ 1ರಂದು ಇಲಾಖೆ ಮೋಹನ್ ಅವರು ಕರ್ತವ್ಯದಲ್ಲಿ ಲೋಪವೆಸಗಿದ್ದಾರೆ ಎಂದು ಸಾಬೀತುಪಡಿಸಿ ವಾರ್ಷಿಕ ಸಂಬಳ ಹೆಚ್ಚಳವನ್ನು ಮುಂದೆ ಹಾಕಲಾಯಿತು. ಆರು ತಿಂಗಳ ಕಾಲ ಮುಂದೆ ಹಾಕಿ ಅಮಾನಿತಿನ ಅವಧಿಯನ್ನು ಅಮಾನತು ಎಂದು ಪರಿಗಣಿಸಿತು. ಇದಕ್ಕೆ ಕಳೆದ ವರ್ಷ ಇನ್ಸ್ ಪೆಕ್ಟರ್ ರಾಜ್ಯ ಪೊಲೀಸ್ ಇಲಾಖೆಯ ಮೇಲ್ಮನವಿ ಪ್ರಾಧಿಕಾರಕ್ಕೆ ಮೊರೆ ಹೋದರು. ಅದಕ್ಕೆ ಪ್ರಾಧಿಕಾರ ಇನ್ಸ್ ಪೆಕ್ಟರ್ ಅವರ ಅರ್ಜಿಯಲ್ಲಿ ಯಾವುದೇ ಬಲವಾದ ಅಂಶಗಳಿಲ್ಲ ಆದರೆ ಅವರಿಗೆ ವಿಧಿಸಿರುವ ಶಿಕ್ಷೆ ದೊಡ್ಡ ಪ್ರಮಾಣದ್ದಾಗಿದೆ ಎಂದು ಹೇಳಿತು. ಇನ್ಸ್ ಪೆಕ್ಟರ್ ಮೋಹನ್ ಕಳೆದ ವರ್ಷ ಮೇ ತಿಂಗಳಲ್ಲಿ ಮತ್ತೆ ಸರ್ಕಾರಕ್ಕೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದರು. ಕಳೆದ ಮಂಗಳವಾರ ಅರ್ಜಿ ತಿರಸ್ಕರಿಸಿದ ರಾಜ್ಯ ಸರ್ಕಾರ ಮೇಲ್ಮನವಿ ಪ್ರಾಧಿಕಾರದ ಆದೇಶ ಸರಿಯಾಗಿದೆ ಎಂದು ಹೇಳಿದೆ.

2013ರಲ್ಲಿ ಇನ್ಸ್ ಪೆಕ್ಟರ್ ಮೋಹನ್ ಅವರ ಅಮಾನತು ವಿವಾದ ಸೃಷ್ಟಿಸಿತ್ತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಕೂಡಲೇ ಅಮಾನತು ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ರಾಕೇಶ್ ಮೇಲಿನ ಕೇಸು ಮುಚ್ಚಲಾಗಿದ್ದು 2016ರ ಜುಲೈಯಲ್ಲಿ ಪೊಲೀಸರು ಬಿ ವರದಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com