ಮಾತೆ ಮಹಾದೇವಿ
ಮಾತೆ ಮಹಾದೇವಿ

ಕಾಂಗ್ರೆಸ್ ಪರ ಮಾತೆ ಮಹಾದೇವಿ ಬ್ಯಾಟಿಂಗ್, ಸಿಎಂ ಉಪಕಾರಕ್ಕೆ ಪ್ರತ್ಯುಪಕಾರ

ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರು ಮಂಗಳವಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಿದ್ದು...
ಬೆಳಗಾವಿ: ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರು ಮಂಗಳವಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಿದ್ದು, ಸಿಎಂ ದಿಟ್ಟ ನಿರ್ಧಾರ ತೆಗೆದುಕೊಂಡು, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಹೀಗಾಗಿ ಉಪಕಾರ ಮಾಡಿದ ಅವರಿಗೆ ಪ್ರತ್ಯುಉಪಕಾರ ಮಾಡಬೇಕು ಎಂದಿದ್ದಾರೆ. ಅಲ್ಲದೆ ಮೇ 12ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು  ಸಮಾಜದವರಿಗೆ ಮಾತೆ ಮಹಾದೇವಿ ಕರೆ ನೀಡಿದ್ದಾರೆ.
ಇಂದು ಗೋಕಾ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ಬಸವ ಮಂಟಪದ ಉದ್ಘಾಟನೆ ಮಾಡಿ ಮಾತನಾಡಿದ ಮಾತೆ ಮಹಾದೇವಿ, ಈ ಐತಿಹಾಸಿಕ ನಿರ್ಣಯವನ್ನು ನೀವು ತೆಗೆದುಕೊಳ್ಳಿ, ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೆವು. ಅದರಂತೆ ಅವರು ನಡೆದುಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ಬೆಂಬಲಿಸುವಂತೆ ಹೇಳಿದ್ದಕ್ಕೆ ಕೆಲವರು ಕೋಪ ಮಾಡಿಕೊಂಡಿದ್ದಾರೆ. ಮುಚ್ಚು ಮರೆ ಏಕೆ? ಬೆಂಬಲಿಸುತ್ತೇನೆ ಎನ್ನುವುದನ್ನು ಬಹಿರಂಗವಾಗಿಯೇ ಹೇಳುತ್ತೇನೆ. ಹಿಂದೊಂದು, ಮುಂದೊಂದು ಹೇಳುವುದು ನಮಗೆ ಗೊತ್ತಿಲ್ಲ ಎಂದು ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದರು.
ಲಿಂಗಾಯತ ಜಾತಿಯಲ್ಲ ಅದು ಧರ್ಮ ಎನ್ನುವುದನ್ನು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ. ಹಿಂದೂ ಲಿಂಗಾಯತ ಎಂದು ಹೇಳುವುದು ಮಹಾ ಅಪರಾಧ ಎಂದರು.
ನಮ್ಮ ವ್ಯಾಪಕ ಹೋರಾಟದ ಫಲವಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಧಾರ್ಮಿಕ ಅಲ್ಪಸಂಖ್ಯಾತರು ಎನ್ನುವ ಮಾನ್ಯತೆಯನ್ನೂ ಕೊಡಬೇಕು ಎಂದು ಕೋರಲಾಗಿದೆ. 900 ವರ್ಷಗಳ ನಂತರ ಈ ಐತಿಹಾಸಿಕ ಕಾರ್ಯ ನಡೆದಿದೆ. ಒಳ ಹಾಗೂ ಹೊರಗಿನ ವಿರೋಧಗಳನ್ನು ಲೆಕ್ಕಿಸದೇ ಸಿದ್ದರಾಮಯ್ಯ ಅವರ ಸರ್ಕಾರ ಈ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com