ರೈಲಿನಲ್ಲಿ ಮರೆತು ಬಿಟ್ಟು ಹೋದ ಕ್ಯಾಮರಾ ಮತ್ತೆ ಪಡೆದ ಪ್ರಯಾಣಿಕ!

ತಮಿಳುನಾಡಿನ ಮೈಲಾಡುತುರೈ ರೈಲು ನಿಲ್ದಾಣದಲ್ಲಿ ಮುಂಜಾನೆ ವೇಳೆ ಕರೈಕಲ್ ಪ್ಯಾಸೆಂಜರ್ ...
ರೈಲಿನಲ್ಲಿ ಬಾಕಿಯಾಗಿದ್ದ ನವನೀ
ರೈಲಿನಲ್ಲಿ ಬಾಕಿಯಾಗಿದ್ದ ನವನೀ

ಬೆಂಗಳೂರು: ತಮಿಳುನಾಡಿನ ಮೈಲಾಡುತುರೈ ರೈಲು ನಿಲ್ದಾಣದಲ್ಲಿ ಮುಂಜಾನೆ 6.30ರ ಹೊತ್ತಿಗೆ ಕರೈಕಲ್ ಪ್ಯಾಸೆಂಜರ್ ರೈಲಿಗೆ ಹತ್ತಿದ್ದ ಫೋಟೋಗ್ರಫರ್ ಒಬ್ಬರು ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಸಾಯಂಕಾಲ ದುಬಾರಿ ಕ್ಯಾಮರಾ ಬ್ಯಾಗನ್ನು ಮರೆತು ಇಳಿದು ಹೋದ ನಂತರ ಮತ್ತೆ ಪಡೆದ ಘಟನೆ ಮೂರು ದಿನಗಳ ಹಿಂದೆ ನಡೆದಿದೆ.

ರೈಲು ಮೆಜೆಸ್ಟಿಕ್  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬರುತ್ತಿತ್ತು. ತಡಮಾಡದೆ ಮೆಜೆಸ್ಟಿಕ್ ಗೆ ಬಂದು ನೋಡುವ ಹೊತ್ತಿಗೆ ಅದೇ ಬೋಗಿಯ ಸೀಟಿನಲ್ಲಿ ಕ್ಯಾಮರಾವಿತ್ತು. ರೈಲ್ವೆ ರಕ್ಷಣಾ ಪಡೆಯ ಇಬ್ಬರು ಭದ್ರತಾ ಸಿಬ್ಬಂದಿ ಕ್ಯಾಮರಾವನ್ನು ತಾವೇ ಹುಡುಕಿಕೊಟ್ಟಿದ್ದು ಎಂದು ಪ್ರಯಾಣಿಕನ ಬಳಿ ಪತ್ರಕ್ಕೆ ಸಹಿ ಹಾಕಿಸಿಕೊಂಡ ಘಟನೆಯೂ ನಡೆಯಿತು.

ಘಟನೆ ವಿವರ:
ಮೊನ್ನೆ 11ನೇ ತಾರೀಖಿನಂದು ಸಿ.ನವೀಂದರನ್ ಗೆ ಸುಮಾರು 90 ನಿಮಿಷಗಳ ಕಾಲ ದಿಕ್ಕೇ ತೋಚದ ಪರಿಸ್ಥಿತಿ ಉಂಟಾಗಿತ್ತು. ಬೆಂಗಳೂರಿನ ಯಲಹಂಕ ಬಳಿ ಮದುವೆ ರಿಸೆಪ್ಷನ್ ಒಂದರ ವಿಡಿಯೊ ಮಾಡಲು ಆಗಮಿಸಿದ್ದರು. ತಮ್ಮೂರಿನಲ್ಲಿ 2 ಲಕ್ಷ ರೂಪಾಯಿ ಬಾಡಿಗೆ ಕೊಟ್ಟು ದುಬಾರಿ ಕ್ಯಾಮರಾ ತಂದಿದ್ದರು. ಬೆಳಗ್ಗೆ 6.20ರ ಸುಮಾರಿಗೆ ತಮಿಳುನಾಡಿನ ಮೈಲಾಡುತುರೈ ರೈಲು ನಿಲ್ದಾಣದಲ್ಲಿ ಸಾಮಾನ್ಯ ಬೋಗಿಯಲ್ಲಿ ಹತ್ತಿ ಕುಳಿತು ಬೆಂಗಳೂರು ಕಡೆಗೆ ಮದುವೆ ಆರತಕ್ಷತೆಯ ವಿಡಿಯೊ ಮಾಡಲು ಪ್ರಯಾಣಿಸುತ್ತಿದ್ದರು.

ಬೋಗಿಯ ಕೆಳಗಿನ ಸೀಟಿನ ಕೆಳಗೆ ಬ್ಯಾಗಿನಲ್ಲಿ ಕ್ಯಾಮರಾವನ್ನು ಭದ್ರವಾಗಿಟ್ಟಿದ್ದರು.
ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಸಾಯಂಕಾಲ 6.35ರ ಸುಮಾರಿಗೆ ರೈಲು ಬಂದು ತಲುಪಿತು. ರೈಲಿಂದ ಇಳಿಯುತ್ತಿದ್ದಾಗ ನವೀಂದರನ್ ಬೇರೆ ಎರಡು ಲಗ್ಗೇಜು ತೆಗೆದುಕೊಂಡು ಕ್ಯಾಮರಾ ಬ್ಯಾಗನ್ನು ಮರೆತು ಇಳಿದರು.

ಇಳಿದ ಮೇಲೆ ಕೆಲವೇ ಕ್ಷಣಗಳಲ್ಲಿ ಕ್ಯಾಮರಾ ರೈಲಿನಲ್ಲಿಯೇ ಬಾಕಿಯಾಯಿತು ಎಂದು ಗೊತ್ತಾದ ತಕ್ಷಣ ಎಲ್ಲಾ ರೈಲ್ವೆ ಪೊಲೀಸ್ ಸಂಖ್ಯೆಗೆ ನವೀಂದರನ್ ಕರೆ ಮಾಡಲು ಪ್ರಯತ್ನಿಸಿದರು. ಆದರೆ ಸಂಪರ್ಕಕ್ಕೆ ಸಿಗಲಿಲ್ಲ. ರೈಲು ನಿಲ್ದಾಣದ ಹೊರಗೆ ಬಂದು ಆಟೋವೊಂದಕ್ಕೆ ಹತ್ತಿ ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಹೋದರು. ಈ ಹೊತ್ತಿನಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು.

ಈ ನಡುವಿನ ಅವಧಿಯನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆ ಹಂಚಿಕೊಂಡ ನವೀಂದರನ್, ನಾನು ತುಂಬಾ ಗಾಬರಿಯಾದೆ. ಯಾರಾದರೂ ರೈಲಿನಲ್ಲಿ ಕ್ಯಾಮರಾ ಬ್ಯಾಗನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ಭಾವಿಸಿದೆ. 2 ಲಕ್ಷ ರೂಪಾಯಿ ಹೊಂದಿಸಿ ಬಾಡಿಗೆ ಮೊತ್ತ ನೀಡುವುದು ಹೇಗೆ ಎಂದು ಮನಸ್ಸಿನಲ್ಲಿಯೇ ಯೋಚಿಸುತ್ತಿದ್ದೆ. ರಿಸೆಪ್ಷನ್ ಗೆ ಸಹ ಹೋಗಲು ಸಾಧ್ಯವಾಗುವುದಿಲ್ಲ, ಏನು ಮಾಡುವುದು ಎಂದು ಗಾಬರಿಯಲ್ಲಿದ್ದೆ.

ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಟೋದಲ್ಲಿ ತಲುಪಿದ ನಂತರ ಆತುರವಾಗಿ ರೈಲ್ವೆ ಭದ್ರತಾ ಸಿಬ್ಬಂದಿಯನ್ನು ಹೋಗಿ ಕೇಳಿದೆ. ರೈಲು ಸ್ವಲ್ಪ ಹೊತ್ತಿಗೆ ಮುಂಚೆ ಬಂದಿದೆ. ಅದನ್ನು ಇನ್ನೂ ನಿರ್ವಹಣೆಗೆ ತೆಗೆದುಕೊಂಡು ಹೋಗಿಲ್ಲ. ನೀವೇ ಹೋಗಿ ಪರೀಕ್ಷೆ ಮಾಡಿಕೊಳ್ಳಿ ಎಂದು ಸಿಬ್ಬಂದಿ ಹೇಳಿದರು.

ಓಡಿ ಹೋಗಿ ರೈಲಿನಲ್ಲಿ ನಾನು ಕುಳಿತಿದ್ದ ಬೋಗಿಯ ಸೀಟಿಗೆ ಹತ್ತಿ ನೋಡಿದಾಗ ಕಸ ಗುಡಿಸುತ್ತಿದ್ದವರು ಕ್ಯಾಮರಾ ಬ್ಯಾಗನ್ನು ತೆರೆದು ಅದರಲ್ಲಿ ಏನಿದೆ ಎಂದು ನೋಡುತ್ತಿದ್ದರು. ಆತಂಕವೆಲ್ಲ ಒಂದೇ ಸಲಕ್ಕೆ ಕಡಿಮೆಯಾಗಿ ಆ ಬ್ಯಾಗ್ ನನ್ನದು ಎಂದು ಹೇಳಿ ಅವರಿಂದ ತೆಗೆದುಕೊಂಡೆ ಎನ್ನುತ್ತಾರೆ ನವೀಂದರನ್.

ಬ್ಯಾಗ್ ಸಿಕ್ಕಿತೆಂದು ಹೇಳಲು ನವೀಂದರನ್ ರೈಲ್ವೆ ಭದ್ರತಾ ಸಿಬ್ಬಂದಿ ಬಳಿ ಹೋದಾಗ ಅವರು ಪತ್ರವೊಂದನ್ನು ನೀಡಿ ಅದರಲ್ಲಿ ರೈಲನ್ನು ತಪಾಸಣೆ ಮಾಡುತ್ತಿದ್ದಾಗ ಬ್ಯಾಗ್ ಸಿಕ್ಕಿತೆಂದು, ಅದನ್ನು ಸಂಬಂಧಪಟ್ಟವರಿಗೆ ನೀಡಿದೆವೆಂದು ಬರೆದಿದ್ದರು. ಅದಕ್ಕೆ ಸಹಿ ಮಾಡುವಂತೆ ನವನೀಧರನ್ ಸೂಚಿಸಿದರು.

ಬ್ಯಾಗ್ ಸಿಕ್ಕಿದ ಖುಷಿಯಲ್ಲಿ ಮತ್ತು ಮದುವೆ ರಿಸೆಪ್ಷನ್ ಗೆ  ಹೋಗಬೇಕಾಗಿದ್ದರಿಂದ ಪ್ರಶ್ನೆ ಮಾಡದೆ ನವನೀಧರನ್ ಪತ್ರಕ್ಕೆ ಸಹಿ ಹಾಕಿ ಅಲ್ಲಿಂದ ಹೊರಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com