ಆಫೀಸ್ ಗೆ ರಜೆ ಹಾಕಿ ಟಿವಿ ಮುಂದೆ ಕುಳಿತು ಚುನಾವಣೆ ಫಲಿತಾಂಶ ವೀಕ್ಷಿಸುತ್ತಿರುವ ಉದ್ಯೋಗಿಗಳು!

ನಗರ ಪ್ರದೇಶದ ಜನತೆ ಅದರಲ್ಲೂ ಯುವಕ-ಯುವತಿಯರು ಕ್ರಿಕೆಟ್ ಮ್ಯಾಚ್, ಫುಟ್ ಬಾಲ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ನಗರ ಪ್ರದೇಶದ ಜನತೆ ಅದರಲ್ಲೂ ಯುವಕ-ಯುವತಿಯರು ಕ್ರಿಕೆಟ್ ಮ್ಯಾಚ್, ಫುಟ್ ಬಾಲ್ ಪಂದ್ಯಗಳಿದ್ದರೆ ಆಫೀಸುಗಳಿಗೆ ರಜೆ ಹಾಕಿ ಮನೆಯಲ್ಲಿಯೋ, ಸ್ನೇಹಿತರ ಜೊತೆಗೋ ಪಂದ್ಯ ನೋಡಿಕೊಂಡು ಇರುತ್ತಾರೆ.

ಇಂತಹದ್ದೇ ವಾತಾವರಣ ಈ ಬಾರಿ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿಯೂ ಕಂಡುಬರುತ್ತಿದೆ. ಕೆಲವರು ಇಡೀ ದಿನ ರಜೆ ತೆಗೆದುಕೊಂಡರೆ, ಮತ್ತೆ ಕೆಲವರು ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಾ ಟಿವಿ ಮುಂದೆ ಕುಳಿತು ಚುನಾವಣಾ ಫಲಿತಾಂಶ ವೀಕ್ಷಿಸುತ್ತಿದ್ದಾರೆ.

ಈ ವರ್ಷ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ರಾಜ್ಯದ ಜನತೆಯಲ್ಲಿ ಭಾರೀ ಕುತೂಹಲವನ್ನು ಕೆರಳಿಸಿದೆ. ಏನಾಗುತ್ತದೆ, ಯಾವುದಕ್ಕೆ ಬಹುಮತ ಬರುತ್ತದೆ, ಅತಂತ್ರ ಫಲಿತಾಂಶ ಬರುತ್ತದೆಯೇ ಎಂಬ ಬಗ್ಗೆ ಎಲ್ಲಾ ಕಡೆ ಜನರು ಚರ್ಚೆ ಮಾಡಿಕೊಳ್ಳುತ್ತಿರುವುದನ್ನು ನೋಡಬಹುದು. ಕಾಂಗ್ರೆಸ್ ಗೆ ಇದು ಮಾಡು ಇಲ್ಲವೇ ಮಡಿ ಎಂಬ ಸ್ಥಿತಿಯಾದರೆ, ಬಿಜೆಪಿಗೆ ಪ್ರತಿಷ್ಠೆಯ ವಿಚಾರ ಇನ್ನು ಜೆಡಿಎಸ್ ಗೆ ಉಳಿವಿಗಾಗಿ ಹೋರಾಟವಾಗಿದೆ. ಈ ಮೂರೂ ಪಕ್ಷಗಳ ನಡುವಿನ ತೀವ್ರ ಹೋರಾಟ, ಪೈಪೋಟಿಯಿಂದ ಈ ಬಾರಿಯ ಚುನಾವಣಾ ರಂಗು ಹಿಂದೆಂದಿಗಿಂತಲೂ ತಾರಕಕ್ಕೇರಿದೆ. ಮೂರೂ ಪಕ್ಷಗಳ ಕಾರ್ಯಕರ್ತರಲ್ಲಿ ಗೊಂದಲ, ಆತಂಕ ಮನೆಮಾಡಿದೆ ಎಂದರೆ ತಪ್ಪಾಗಲಾರದು.

ಐಟಿ ಉದ್ಯೋಗಿಯಾಗಿರುವ ಕೆ.ಎ.ಚಂದ್ರಕಾಂತ್ ಇಂದು ತಮ್ಮ ಆಫೀಸಿಗೆ ರಜೆ ಹಾಕಿದ್ದಾರೆ. ನಾನು ಮತ್ತು ನನ್ನ ಕೆಲವು ಸ್ನೇಹಿತರು ಇಂದು ಸ್ನೇಹಿತರೊಬ್ಬರ ಮನೆಯಲ್ಲಿ ಒಟ್ಟು ಸೇರಿ ಚುನಾವಣಾ ಫಲಿತಾಂಶ ವೀಕ್ಷಿಸುತ್ತೇವೆ. ನಾವು ಕೆಲಸಕ್ಕೆ ಹೋದರೆ ಕ್ಷಣ ಕ್ಷಣದ ಸುದ್ದಿಯನ್ನು ನೋಡಲಾಗುವುದಿಲ್ಲ. ಕ್ರಿಕೆಟ್ ಮ್ಯಾಚ್ ನೋಡಿದಂತೆ ಚುನಾವಣಾ ಫಲಿತಾಂಶವನ್ನು ನೋಡಲು ನಾವು ನಿರ್ಧರಿಸಿದ್ದೇವೆ. ಮತದಾನೋತ್ತರ ಸಮೀಕ್ಷೆಗಳು ಹಲವು ಬಂದಿವೆ.

ಕೆಲವರು ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತದೆ ಎನ್ನುತ್ತಾರೆ. ನಮಗಂತೂ ತೀವ್ರ ಕುತೂಹಲವಿದೆ ಎನ್ನುತ್ತಾರೆ, ಆಫೀಸಲ್ಲಿ ಏನು ಕೇಳಿ ರಜೆ ತೆಗೆದುಕೊಂಡಿರಿ ಎಂದರ ಏನಿಲ್ಲ, ಕೇವಲ ಸಾಮಾನ್ಯ ರಜೆ ಎಂದು ಅರ್ಜಿ ಹಾಕಿದೆ ಎನ್ನುತ್ತಾರ ಚಂದ್ರಕಾಂತ್.

ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಶ್ರೀಧರ್ ಎಂ.ಎನ್ ಕೂಡ ಕಚೇರಿಗೆ ರಜೆ ಹಾಕಿದ್ದಾರೆ. ನನಗೆ ಇಂದಿನ ಫಲಿತಾಂಶದಲ್ಲಿ ಆಫೀಸಿನಲ್ಲಿ ಕುಳಿತು ಕೆಲಸ ಮಾಡಲು ಸಾಧ್ಯವಿಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಕ್ಷಣ ಕ್ಷಣದ ಸುದ್ದಿಗಳು ಬರುತ್ತವೆ, ಆದರೆ ನಾನು ಸೋಷಿಯಲ್ ಮೀಡಿಯಾದಲ್ಲಿ ಇಲ್ಲ. ಟಿವಿ ಮುಂದೆ ಕುಳಿತು ಫಲಿತಾಂಶ ನೋಡಿದರೆ ಮನಸ್ಸಿಗೆ ಸಮಾಧಾನ, ನನಗೆ ರಾಜ್ಯ ರಾಜಕೀಯದಲ್ಲಿ ಆಸಕ್ತಿ ಹೆಚ್ಚು, ಅದರಲ್ಲೂ ಈ ಬಾರಿಯ ಚುನಾವಣೆ ಇನ್ನಷ್ಟು ಆಸಕ್ತಿಕರವಾಗಿದೆ ಎನ್ನುತ್ತಾರೆ.

ವಿಕಾಸ್ ಸೌಧದಲ್ಲಿ ಕೆಲಸ ಮಾಡುತ್ತಿರುವ ಮಹೇಶ್ ಇಂದು ಅಸೌಖ್ಯ ರಜೆ ಎಂದು ತೆಗೆದುಕೊಂಡಿದ್ದಾರೆ. ನಾನು ಕಚೋರಿಯಲ್ಲಿ ಹೇಳಿಲ್ಲ. ಇಂದು ಬೆಳಗ್ಗೆ ಹುಷಾರಿಲ್ಲ, ಆಫೀಸಿಗೆ ಬರುವುದಿಲ್ಲ ಎಂದು ಹೇಳಿದೆ, ನನಗೆ ಜೆಡಿಎಸ್ ಗೆಲ್ಲಬೇಕೆಂದು ಆಸೆ ಎನ್ನುತ್ತಾರೆ.

ಇಂದಿರಾನಗರದಲ್ಲಿ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಪ್ರಿಯಂವದ ಶ್ರೀನಿವಾಸ್ ಮನೆಯಿಂದಲೇ ಇಂದು ಆಫೀಸು ಕೆಲಸ ಮಾಡಲಿದ್ದಾರೆ. ನನ್ನ ಪತಿಗೆ ಎರಡು ವಾರ ಹಿಂದೆ ಆಕ್ಸಿಡೆಂಟ್ ಆಗಿ ಕಾಲಿಗೆ ಪೆಟ್ಟಾಗಿ ಮನೆಯಲ್ಲಿ ರಜೆಯಲ್ಲಿದ್ದಾರೆ. ನನ್ನ ಮೈದುನ ಮತ್ತು ತಂಗಿ ಕೂಡ ಕಚೇರಿಗೆ ರಜೆ ಹಾಕಿ ಮನೆಯಲ್ಲಿದ್ದಾರೆ. ನಾನು ಕೂಡ ಇಂದು ಮನೆಯಿಂದಲೇ ಕೆಲಸ ಮಾಡಲಿದ್ದೇನೆ, ನಮಗಿಂದು ಹಬ್ಬದಂತೆ, ನಮ್ಮತ್ತೆ ಇಂದು ಮಾಂಸದಡುಗೆ ಮತ್ತು ಸ್ವೀಟ್ ಮಾಡಲಿದ್ದಾರೆ. ಪ್ರಜಾಪ್ರಭುತ್ವದ ಹಬ್ಬವನ್ನು ಇಂದು ನಾವು ಆಚರಿಸಲಿದ್ದೇವೆ, ನಮಗೆ ಬಿಜೆಪಿ ಗೆಲ್ಲಬೇಕೆಂದು ಆಸೆ, ಯಾವ ಸರ್ಕಾರ ಬಂದರೂ ಸ್ಥಿರ ಸರ್ಕಾರ ಬರಲಿ ಎಂಬುದು ನಮ್ಮ ಆಶಯ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com