
ಬೆಂಗಳೂರು: ಇಡೀ ಕರ್ನಾಟಕ ಜನತೆಯ ಕುತೂಹಲದ ಕೇಂದ್ರವಾಗಿರುವ ಬೆಂಗಳೂರಿನ ಶಕ್ತಿಕೇಂದ್ರ ವಿಧಾನಸೌಧದ ಸದನದಲ್ಲಿ ಇಂದು ವಿಧಾನಸಭಾಧ್ಯಕ್ಷರ ಸಮ್ಮುಖದಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ. ಈ ಸಂದರ್ಭದಲ್ಲಿ ಹೈದರಾಬಾದ್ ನ ಹೊಟೇಲ್ ಗೆ ಕರೆದೊಯ್ಯಲಾಗಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಮಧ್ಯರಾತ್ರಿ ಬೆಂಗಳೂರಿಗೆ 4 ಬಸ್ಸುಗಳಲ್ಲಿ ವಾಪಸ್ಸಾಗುತ್ತಿದ್ದಾರೆ. ಇನ್ನು ಕೆಲವೇ ಸಮಯದಲ್ಲಿ ಬೆಂಗಳೂರಿಗೆ ತಲುಪಲಿದ್ದಾರೆ.
ಇಂದು ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಗೆ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಆದೇಶಿಸಿದ್ದಾರೆ. ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ವಿಧಾನಸೌಧದಿಂದ 2 ಕಿಲೋ ಮೀಟರ್ ಸುತ್ತಮುತ್ತ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಹೈದರಾಬಾದ್ ನಿಂದ ಶಾಸಕರ ಆಗಮನವಾಗುತ್ತಿದ್ದಂತೆ ಖಾಸಗಿ ಹೊಟೇಲ್ ಗೆ ತೆರಳಿ ಅಲ್ಲಿ ನಿತ್ಯ ವಿಧಿಗಳನ್ನು ಪೂರೈಸಿ 11 ಗಂಟೆ ಹೊತ್ತಿಗೆ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ.
ವಿಧಾನಸೌಧ ಸುತ್ತಮುತ್ತ ತೀವ್ರ ಭದ್ರತೆಗೆ ಸುಮಾರು 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ. ನಿನ್ನೆ ಹೈದರಾಬಾದ್ ನಿಂದ ಹೊರಟ ಶಾಸಕರಿಗೆ ಭದ್ರತೆ ಒದಗಿಸಲು ಚಿಕ್ಕಬಳ್ಳಾಪುರ ಗಡಿಯವರೆಗೆ ತೆಲಂಗಾಣ ಪೊಲೀಸರು ನಂತರ ಕರ್ನಾಟಕ ಪೊಲೀಸರು ಕಣ್ಗಾವಲು ಇರಿಸಿದ್ದಾರೆ. ಸೆಕ್ಷನ್ 144ನ್ನು ಜಾರಿಗೆ ತರಲಾಗಿದೆ.
ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಶಾಸಕರನ್ನು ಕರೆತಂದ ಬಸ್ಸುಗಳು ಬೆಂಗಳೂರಿಗೆ ತಲುಪಿವೆ.
ಕಾಂಗ್ರೆಸ್ ಶಾಸಕರು ಬೆಂಗಳೂರಿನ ಹಿಲ್ಟನ್ ಹೊಟೇಲ್ ಗೆ ಮತ್ತು ಜೆಡಿಎಸ್ ಶಾಸಕರು ಬೆಂಗಳೂರಿನ ಲಿ ಮೆರಿಡಿಯನ್ ಹೊಟೇಲ್ ಗೆ ಬಂದಿಳಿದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಡಾಲರ್ಸ್ ಕಾಲೊನಿಯಲ್ಲಿರುವ ನಿವಾಸ ಧವಳಗಿರಿಯಲ್ಲಿ ಪೊಲೀಸರು ತೀವ್ರ ಭದ್ರತೆ ಏರ್ಪಡಿಸಿದ್ದಾರೆ.
ನಿನ್ನೆ ಹೈದರಾಬಾದ್‌ನಲ್ಲಿಯೇ ಶಾಸಕಾಂಗ ಪಕ್ಷದ ಸಭೆ ನಡೆಸಿದ ಕಾಂಗ್ರೆಸ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇರೆಗೆ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಶಾಸಕಾಂಗ ಸಭೆಯಲ್ಲಿ ಎಲ್ಲ ಶಾಸಕರನ್ನೂ ಉದ್ದೇಶಿಸಿ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ ಬಹುಮತ ಸಾಬೀತು ಮಾಡುವ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಮತ ಹಾಕುವಂತೆ ಸೂಚಿಸಿದ್ದಾರೆ.ಕಾಂಗ್ರೆಸ್‌ನಲ್ಲಿ ಮಾತ್ರ ಎಲ್ಲರೂ ಬೆಳೆಯಲು ಸಾಧ್ಯ. ಬಿಜೆಪಿ 2008ರಲ್ಲಿ ಶಾಸಕರನ್ನು ಬಳಸಿಕೊಂಡು ಏನು ಮಾಡಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಪಾವಗಡ ಶಾಸಕ ವೆಂಕಟರಮಣಪ್ಪ ಅವರ ಅನುಭವ ಕೇಳಿ.
ಬಿಜೆಪಿ ನಾಯಕರ ಮಾತಿಗೆ ಮರುಳಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ. ಯಾರಿಗೆ ಯಾವ ರೀತಿಯ ಫೋನ್ ಬಂದಿದೆ ಎನ್ನುವುದು ಗೊತ್ತಿದೆ. ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ ಆತಂಕದ ಪರಿಸ್ಥಿತಿ ಎದುರಿಸುತ್ತಿದೆ. ಎಲ್ಲರೂ ಪಕ್ಷದ ಪರ ನಿಲ್ಲಬೇಕೆಂದು ಸಿದ್ದರಾಮಯ್ಯ ಶಾಸಕರಿಗೆಮನವಿ ಮಾಡಿದ್ದಾರೆ.
Advertisement