
ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತು ಈ ಪ್ರಕರಣಕ್ಕೆ ಸರಿಯಾಗಿ ಅನ್ವಯವಾಗುತ್ತದೆ.
ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯ ವ್ಯವಸ್ಥಾಪಕರೊಬ್ಬರು ಹಣವನ್ನು ತಮ್ಮ ಪತ್ನಿ, ಪುತ್ರ ಮತ್ತು ಬೇರೆ ಸಂಬಂಧಿಕರ ಖಾತೆಗಳಿಗೆ ವರ್ಗಾಯಿಸಿ ಗ್ರಾಹಕರನ್ನು ಮತ್ತು ತಮ್ಮದೇ ಬ್ಯಾಂಕಿಗೆ ಸುಮಾರು 1.47 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ. ಸುಂಕದಕಟ್ಟೆ ಸ್ಟೇಟ್ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ಎನ್ ರಘುರಾಮ್ ಆರೋಪಿಯಾಗಿದ್ದಾರೆ.
ಈ ಸಂಬಂಧ ಸುಂಕದಕಟ್ಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ರಘುರಾಮ್ ಗ್ರಾಹಕರನ್ನು ಮತ್ತು ಬ್ಯಾಂಕನ್ನು ವಂಚಿಸಿದ್ದಾರೆ.
ಈ ಸಂಬಂಧ ಸುಂಕದಕಟ್ಟೆ ಎಸ್ ಬಿಐ ಶಾಖೆಯ ವ್ಯವಸ್ಥಾಪಕ ಯು ಎಮ್ ಬಸವರಾಜು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಅವರು, 2014ರ ಸೆಪ್ಟೆಂಬರ್ 22ರಿಂದ 2017, ನವೆಂಬರ್ 15ರವರೆಗೆ ಸುಂಕದಕಟ್ಟೆ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿದ್ದ ರಘುರಾಮ್ ಗ್ರಾಹಕರ ಖಾತೆಗಳಲ್ಲಿ ಮತ್ತು ಸಹಿಗಳನ್ನು ನಕಲು ಮಾಡಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು.
ಬ್ಯಾಂಕಿನ ಖಾತೆಗಳಿಂದ ಹಣ ಕಳೆದುಕೊಂಡ ಗ್ರಾಹಕರ ಹೆಸರುಗಳನ್ನು ಪೊಲೀಸರು ದಾಖಲಿಸಿಕೊಂಡಿರುವ ಎಫ್ ಐಆರ್ ನಲ್ಲಿ ಸೂಚಿಸಲಾಗಿದೆ. ಗ್ರಾಹಕರು ಸಾಲ ಪಡೆಯಲು ಅರ್ಜಿ ಸಲ್ಲಿಸಿದಾಗ ರಘುರಾಮ್ ಅವರ ಸಹಿಗಳನ್ನು ನಕಲು ಮಾಡಿಕೊಂಡು ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣವನ್ನು ಅವರಿಗೆ ಮಂಜೂರು ಮಾಡಿಸುತ್ತಿದ್ದರು. ನಂತರ ಅದಕ್ಕೆ ತಕ್ಕಂತೆ ಸಾಲವನ್ನು ಮಂಜೂರು ಮಾಡುತ್ತಿದ್ದರು. ಹೆಚ್ಚುವರಿ ಹಣವನ್ನು ತನ್ನ ಕುಟುಂಬ ಸದಸ್ಯರ ಬ್ಯಾಂಕು ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದರು. ಆದರೆ ಬ್ಯಾಂಕಿನ ದಾಖಲೆಗಳಲ್ಲಿ ಗ್ರಾಹಕರು ಅಷ್ಟು ಸಾಲವನ್ನು ಕೇಳಿದ್ದಾರೆ ಎಂದು ತೋರಿಸುತ್ತಿತ್ತು. ಈ ರೀತಿ ರಘುರಾಮ್ ಬ್ಯಾಂಕಿಗೆ 1.47 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ.
ಇದೀಗ ಅದೇ ಶಾಖೆಯ ವ್ಯವಸ್ಥಾಪಕರು ನೀಡಿರುವ ದೂರಿನ ಆಧಾರದ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸರು ರಘುರಾಮ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದು ಪ್ರಕರಣದ ಮೊದಲ ಆರೋಪಿಯಾಗಿ ಕಳೆದ ಅಕ್ಟೋಬರ್ 9ರಿಂದ ನ್ಯಾಯಾಂಗ ಬಂಧನದಲ್ಲಿದ್ದರು.
ಜಾಮೀನು ಮಂಜೂರು: ತಾವು ಈ ಪ್ರಕರಣದಲ್ಲಿ ಅಮಾಯಕ ಎಂದು ಹೇಳಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ರಘುರಾಮ್ ಗೆ 55ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ 1 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ಹಾಕುವ ಮೂಲಕ ಜಾಮೀನು ಮಂಜೂರು ಮಾಡಿದೆ. ವಾರಕ್ಕೊಮ್ಮೆ ತನಿಖೆಗೆ ಸಹಕರಿಸುವಂತೆ ಮತ್ತು ಸಾಕ್ಷಿಗಳನ್ನು ನಾಶಪಡಿಸದಂತೆ ಆದೇಶ ನೀಡಿದೆ.
Advertisement