ಬಿಡಿಎ ನಿರ್ಲಕ್ಷ್ಯ: ಒಬ್ಬರಿಗೆ ಮಂಜೂರಾದ ನಿವೇಶನದಲ್ಲಿ ಮತ್ತೊಬ್ಬರು ವಾಸ್ತವ್ಯ!

ಸರ್ಕಾರದಿಂದ ಮಂಜೂರಾದ ನಿವೇಶನದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಇನ್ಯಾರೊ ಬಂದು ...
ವೆಂಕಟೇಶ್ -ಲಕ್ಷ್ಮಿ ದಂಪತಿಗೆ ಮಂಜೂರಾದ ನಿವೇಶನದಲ್ಲಿರುವ ಮನೆ
ವೆಂಕಟೇಶ್ -ಲಕ್ಷ್ಮಿ ದಂಪತಿಗೆ ಮಂಜೂರಾದ ನಿವೇಶನದಲ್ಲಿರುವ ಮನೆ

ಬೆಂಗಳೂರು: ಸರ್ಕಾರದಿಂದ ಮಂಜೂರಾದ ನಿವೇಶನದಲ್ಲಿ ಬೇರೊಬ್ಬರು ಮನೆ ಕಟ್ಟಿ ಕುಳಿತರೆ ಎಂತವರಿಗೂ ವೇದನೆ ಸಹಿಸಲು ಸಾಧ್ಯವಾಗುವುದಿಲ್ಲ. ಹೆಚ್ ಆರ್ ಲಕ್ಷ್ಮಿ ಮತ್ತು ವೆಂಕಟೇಶ್ ದಂಪತಿಗೆ ಆದ ಪರಿಸ್ಥಿತಿ ಕೂಡ ಇದೇ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಾಡಪ್ರಭು ಕೆಂಪೇಗೌಡ ಲೇಔಟ್ ನ ಎರಡನೇ ಹಂತದಲ್ಲಿ ವಿತರಣೆಯಾದ 4 ಸಾವಿರದ 970 ಸೈಟುಗಳಲ್ಲಿ ಹೆಚ್ ಆರ್ ಲಕ್ಷ್ಮಿಗೆ ಮೈಸೂರು ರಸ್ತೆ ಪಕ್ಕ ಭೀಮನಕುಪ್ಪೆ ಗ್ರಾಮದಲ್ಲಿ ನಿವೇಶನ ಮಂಜೂರಾಗಿತ್ತು. ಆದರೆ ಅವರ ಸಂತಸ ಹೆಚ್ಚು ದಿನ ಉಳಿಯಲಿಲ್ಲ, ಅವರ ಜಾಗದಲ್ಲಿ ಬೇರೊಬ್ಬರು ನೆಲೆಸಿದ್ದಾರೆ, ಈ ಬಗ್ಗೆ ವಿಚಾರಿಸಿದರೆ ತಾವು ಎರಡು ದಶಕಗಳಿಂದ ಇಲ್ಲಿ ನೆಲೆಸಿದ್ದು ಯಾವುದೇ ಕಾರಣಕ್ಕೂ ಬಿಟ್ಟು ಹೋಗುವುದಿಲ್ಲ ಎನ್ನುತ್ತಿದ್ದಾರಂತೆ.

ಈ ಎಲ್ಲಾ ಸಮಸ್ಯೆಗೆ ಮೂಲ ಕಾರಣ ಬಿಡಿಎ ಸೈಟುಗಳನ್ನು ಹಂಚಿಕೆ ಮಾಡಿದ ರೀತಿ. ಅದರ ಬೇಜವಾಬ್ದಾರಿ ಕೆಲಸ. ತಾಂತ್ರಿಕ ತೊಂದರೆಯಿಂದ ಒಂದೇ ನಿವೇಶನ ಹಲವು ಫಲಾನುಭವಿಗಳ ಹೆಸರಿಗೆ ಹಂಚಿಕೆಯಾಗಿದೆ. ಹಂಚಿಕೆಯಾದ ಸುಮಾರು 50 ನಿವೇಶನಗಳು ನ್ಯಾಯಾಲಯದಲ್ಲಿ ವ್ಯಾಜ್ಯ ಎದುರಿಸುತ್ತಿದೆ.

ತಮ್ಮ ನೋವನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಹಂಚಿಕೊಂಡ ಲಕ್ಷ್ಮಿಯ ಪತಿ ಎಸ್ ವೆಂಕಟೇಶ್, ಮೂರು ಬಾರಿ ಸಿಗದೆ ನಾಲ್ಕನೇ ಬಾರಿ ನಮಗೆ ನಿವೇಶನ ಸಿಕ್ಕಿದಾಗ ತುಂಬಾ ಖುಷಿಪಟ್ಟೆವು. ಆದರೆ ಅಲ್ಲಿ ಹೋಗಿ ನೋಡಿದಾಗ ಆಘಾತವಾಯಿತು. ಬಿಡಿಎಯಿಂದ ಈ ಬ್ಲಾಕ್ ನಲ್ಲಿ ಹಂಚಿಕೆಯಾದ ಸುಮಾರು ಸಾವಿರ ನಿವೇಶನಗಳಲ್ಲಿ ನಮ್ಮ ನಿವೇಶನದಲ್ಲಿ ಮನೆ ಇದೆ. ಬಿಡಿಎಗೆ ಭೂಮಿ ಮಾರಾಟ ಮಾಡಿದ ರೈತರ ಕೆಲಸದವನೊಬ್ಬ ಅಲ್ಲಿ ಸಣ್ಣ ಮನೆ ನಿರ್ಮಿಸಿ ಕುಳಿತುಕೊಂಡಿದ್ದಾನೆ. ಅವನಲ್ಲಿ ಈ ಬಗ್ಗೆ ಕೇಳಿದರೆ ನನ್ನ ಇಬ್ಬರು ಹೆಣ್ಣು ಮಕ್ಕಳನ್ನು ಸಾಕಿ ಬೆಳೆಸಿ ದೊಡ್ಡ ಮಾಡಿರುವುದು ಇಲ್ಲಿಯೇ. 20 ವರ್ಷಗಳಿಂದ ಇಲ್ಲಿದ್ದೇನೆ, ಒಬ್ಬ ಮಗಳಿಗೆ ಮದುವೆಯಾಗಿದ್ದು ಮತ್ತೊಬ್ಬಾಕೆ ಕೆಲಸಕ್ಕೆ ಹೋಗುತ್ತಿದ್ದಾಳೆ ಎನ್ನುತ್ತಿದ್ದಾನೆ. ಆತ ಈಗ ಬಿಟ್ಟುಕೊಡಲು ತಯಾರಿಲ್ಲ ಎನ್ನುತ್ತಾರೆ ವೆಂಕಟೇಶ್.

ನಮ್ಮ ನಿವೇಶನಕ್ಕೆ ಆರಂಭಿಕ ಠೇವಣಿಯಾಗಿ 2.9 ಲಕ್ಷ ರೂಪಾಯಿ ನೀಡಿದ್ದೇವೆ. ಇನ್ನುಳಿದ 20 ಲಕ್ಷ ರೂಪಾಯಿಗಳನ್ನು ನೀಡಲು ಮುಂದಾಗಿದ್ದೆವು. ಆದರೆ ನಮಗೆ ಸಮಸ್ಯೆಯಿರುವ ಸೈಟ್ ಬೇಡ .ಈ ಬಗ್ಗೆ ಬಿಡಿಎ ಎಂಜಿನಿಯರ್ ಶ್ರೀನಿವಾಸ್ ಅವರನ್ನು ಕೇಳಿದಾಗ, ಎರಡು ತಿಂಗಳು ಕಾಯಿರಿ, ನಂತರ ಅವರನ್ನು ಮನೆ ಬಿಟ್ಟು ಹೋಗುವಂತೆ ಹೇಳುತ್ತೇವೆ ಎಂದು ಉತ್ತರ ಬಂತು. ಆದರೆ ಆ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳು ಇಲ್ಲ, ಸುಮ್ಮನೆ ಬಿಡಿಎ ಅಧಿಕಾರಿಗಳು ಕಾರಣ ನೀಡುತ್ತಿದ್ದಾರಷ್ಟೆ ಎಂದು ವೆಂಕಟೇಶ್ ಹೇಳುತ್ತಾರೆ.

ಈ ಬಗ್ಗೆ ಬಿಡಿಎ ಅಧಿಕಾರಿಗಳನ್ನು ಕೇಳೋಣವೆಂದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com