ಕುಮಾರ ಸ್ವಾಮಿ
ಕುಮಾರ ಸ್ವಾಮಿ

ಟಿಪ್ಪು ಜಯಂತಿಗೆ ಮುಖ್ಯಮಂತ್ರಿ ಅನುಪಸ್ಥಿತಿ: ಕಾರ್ಯಕ್ರಮದಲ್ಲಿ ಜೆಡಿಎಸ್ ಸಚಿವರು ಭಾಗಿ

ವಿವಾದಾತ್ಮಕ ಟಿಪ್ಪು ಜಯಂತಿಗೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಗೈರಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಸಚಿವರು ಭಾಗಿಯಾಗಲಿದ್ದಾರೆ....
ಬೆಂಗಳೂರು: ವಿವಾದಾತ್ಮಕ  ಟಿಪ್ಪು ಜಯಂತಿಗೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಗೈರಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಸಚಿವರು ಭಾಗಿಯಾಗಲಿದ್ದಾರೆ.
ವೈದ್ಯರ ಸಲಹೆ ಮೇರೆಗೆ ಕುಮಾರಸ್ವಾಮಿಯವರು ವಿಶ್ರಾಂತಿಗೆ ಮೊರೆ ಹೋಗಿರುವುದರಿಂದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಮುಖ್ಯ ಮಂತ್ರಿಗಳ ಕಾರ್ಯಾಲಯ ಸ್ಪಷ್ಟಪಡಿಸಿದೆಯಾದರೂ, ವಿವಾದವಾಗಿ ಮಾರ್ಪಟ್ಟಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಷ್ಟವಿಲ್ಲದಿರುವುದರಿಂದಲೇ ವಿಶ್ರಾಂತಿಗೆ ತೆರಳಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಹೀಗಾಗಿ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜೆಡಿಎಸ್ ಪ್ರತಿನಿಧಿಗಳಾಗಿ ಪಶು ಸಂಗೋಪನಾ ಇಲಾಖೆ ಸಚಿವ ವೆಂಕಟರಾವ್ ನಾಡಗೌಡ ಭಾಗವಹಿಸಲಿದ್ದಾರೆ.
ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಪಾಲ್ಗೊಳ್ಳದಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ಗಿಂತ ಮೊದಲು ಕಚೇರಿಯಲ್ಲಿ ಪ್ರತಿವರ್ಷ ಟಿಪ್ಪು ಜಯಂತಿ ಆಚರಿಸಿಕೊಂಡು ಬರುತ್ತಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ,
ಈ ಮಧ್ಯೆ, ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ರಾಜ್ಯ ಹೈಕೋರ್ಟ್‌ ಶುಕ್ರವಾರ ಸ್ಪಷ್ಟವಾಗಿ ನಿರಾಕರಿಸಿದೆ. ಈ ಸಂಬಂಧ ಕೊಡಗಿನ ಕೆ.ಪಿ ಮಂಜುನಾಥ್‌ ಸಲ್ಲಿಸಿದ್ದ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಇದೊಂದು ಸರ್ಕಾರದ ನೀತಿ-ನಿರ್ಧಾರದ ವಿಷಯ ಆಗಿದ್ದು, ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು 2016 ಮತ್ತು 2017ರಲ್ಲಿ ನ್ಯಾಯಾಲಯ ಆದೇಶ ನೀಡಿದೆ. ಹೀಗಿರುವಾಗ ಈಗ ವ್ಯತಿರಿಕ್ತ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿತು.

Related Stories

No stories found.

Advertisement

X
Kannada Prabha
www.kannadaprabha.com