ಶಿವಮೊಗ್ಗ: ಪ್ರಾಣಿಪ್ರಿಯರಿಗೆ ಇಲ್ಲೊಂದು ಸಿಹಿಸುದ್ದಿಯಿದೆ. ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಸಫಾರಿಯಲ್ಲಿ ಇನ್ನು ಮುಂದೆ ಪ್ರಾಣಿಪ್ರಿಯರು ಹೋಗಿ ಅಲ್ಲಿ ತಮ್ಮ ಹುಟ್ಟುಹಬ್ಬದ ದಿನವನ್ನು ಜೀವನಪೂರ್ತಿ ಸ್ಮರಿಸಿಕೊಳ್ಳುವಂತೆ ಮಾಡಿಕೊಳ್ಳಬಹುದು.
ಪ್ರಾಣಿಪ್ರಿಯರು ತಮ್ಮ ಹುಟ್ಟುಹಬ್ಬದಂದು ಈ ಸಫಾರಿಗೆ ಹೋಗಿ ಹುಲಿ, ಸಿಂಹ ಅಥವಾ ಬೇರಾವುದೇ ಪ್ರಾಣಿಯನ್ನು ಒಂದು ದಿನಕ್ಕೆ ದತ್ತು ತೆಗೆದುಕೊಳ್ಳಬಹುದು. ಈ ಸಫಾರಿ ಬೆಂಗಳೂರಿನಿಂದ 311 ಕಿಲೋ ಮೀಟರ್ ಮತ್ತು ಶಿವಮೊಗ್ಗದಿಂದ 10 ಕಿಲೋ ಮೀಟರ್ ದೂರದಲ್ಲಿದೆ. ಹುಟ್ಟುಹಬ್ಬದ ದಿನ ಪ್ರಾಣಿಪ್ರಿಯರಿಗೆ ಪ್ರಾಣಿ ದತ್ತು ತೆಗೆದುಕೊಳ್ಳಲು ಅವಕಾಶವಿರುವ ಸಫಾರಿ ನಮ್ಮ ರಾಜ್ಯದಲ್ಲಿ ಇದೇ ಮೊದಲು.
ತ್ಯಾವರಕೊಪ್ಪ ಸಫಾರಿಯಲ್ಲಿ ಏಳು ಬಂಗಾಳಿ ಹುಲಿ, ನಾಲ್ಕು ಏಷ್ಯಾ ಸಿಂಹ, 18 ಭಾರತೀಯ ಚಿರತೆ, 200 ಚಿಂಕೆ ಮತ್ತು ಸಾಂಬಾರ ಹಾಗೂ ಇನ್ನೂ ಅನೇಕ ಪ್ರಾಣಿಗಳು, ಪಕ್ಷಿಗಳು, ಸರೀಸೃಪಗಳು ಇವೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಸಫಾರಿಯ ಕಾರ್ಯಕಾರಿ ನಿರ್ದೇಶಕ ಬಿ ಮುಕುಂದ್ ಚಂದ್ರ, ಹಲವರು ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳಲು ನೋಡುತ್ತಾರೆ. ಬೇರೆ ಬೇರೆ ಸ್ಥಳಗಳಲ್ಲಿ ಆಚರಿಸಿಕೊಳ್ಳುತ್ತಾರೆ. ನಮ್ಮ ಸಫಾರಿಯಲ್ಲಿ ಪ್ರಾಣಿ ದತ್ತು ತೆಗೆದುಕೊಂಡು ಹುಟ್ಟುಹಬ್ಬ ಆಚರಿಸಿಕೊಳ್ಳುವವರನ್ನು ನಾವು ಸನ್ಮಾನಿಸುತ್ತೇವೆ, ದತ್ತು ತೆಗೆದುಕೊಳ್ಳುವುದೆಂದರೆ ಪ್ರಾಣಿಗಳ ಮೌಲ್ಯ, ಅವುಗಳ ಒಂದು ದಿನದ ಆಹಾರ, ವೈದ್ಯಕೀಯ ವೆಚ್ಚ ಹಾಗೂ ಇನ್ನಿತರ ಆಡಳಿತಾತ್ಮಕ ವೆಚ್ಚಗಳು ಸೇರಿರುತ್ತವೆ, ದತ್ತು ತೆಗೆದುಕೊಂಡವರ ಹೆಸರು ಮತ್ತು ಫೋಟೋಗಳನ್ನು ಪ್ರಕಟಿಸಲಾಗುತ್ತದೆ ಎಂದರು.
ತ್ಯಾವರಕೊಂಡ ಸಫಾರಿ 250 ವಿಸ್ತೀರ್ಣ ಹೊಂದಿದ್ದು ಪ್ರತಿನಿತ್ಯ ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರಸ್ತುತ ವರ್ಷಕ್ಕೆ ಸುಮಾರು 1.82 ಕೋಟಿಯಿಂದ 2 ಕೋಟಿಯವರೆಗೆ ಆದಾಯವಿದ್ದು ಸಫಾರಿಯ ಸುಧಾರಣೆಗೆ ಹೆಚ್ಚಿನ ಅನುದಾನದ ಅವಶ್ಯಕತೆಯಿದೆ ಎಂದರು.
Advertisement